ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಉಮೇಶ ಕತ್ತಿ, ಸಿ.ಪಿ.ಯೋಗೇಶ್ವರ್, ಅರವಿಂದ ಲಿಂಬಾವಳಿಗೆ ಬಿಜೆಪಿ ದೊಡ್ಡ ಶಾಕ್ ನೀಡಿದೆ. ಇನ್ನೇನು ಒಂದು ದಿನದಲ್ಲಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಇವರಿಗೆ ಬಿಜೆಪಿ ಹೈಕಮಾಂಡ್ ಕೈ ಕೊಟ್ಟಿದೆ.
ಗುರುವಾರ ಕೇವಲ 10 ಹೊಸ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂಲ ಬಿಜೆಪಿಯ ಮೂವರು ಮಂತ್ರಿಗಳಾಗಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇಂದು ಮುಂಜಾನೆಯವರೆಗೂ ಕತ್ತಿ, ಲಿಂಬಾವಳಿ ಮತ್ತು ಯೋಗೇಶ್ವರ್ ಸಚಿವರಾಗಲಿದ್ದಾರೆ ಎನ್ನುವ ಸ್ಪಷ್ಟ ಸೂಚನೆ ಇತ್ತು.
ಯೋಗೇಶ್ವರ ಕ್ಷೇತ್ರದಲ್ಲಿ ಸಚಿವ ಯೋಗೇಶ್ವರ್ ಅವರಿಗೆ ಅಭಿನಂದನೆಗಳು ಎನ್ನುವ ಫ್ಲೆಕ್ಸ್ ಗಳು ಕೂಡ ರಾರಾಜಿಸುತ್ತಿದ್ದವು. ಸಂಭ್ರಮಾಚರಣೆಗೂ ಸಿದ್ದತೆ ನಡೆದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಕೇವಲ ಹೊಸ 10 ಶಾಸಕರಿಗೆ ಮಾತ್ರ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನೀಡಿದೆ.
ಈ ವೇಳೆ ಪ್ರತಿಕ್ರಿಯಿಸಿದ ಉಮೇಶ ಕತ್ತಿ, ಅವಕಾಶ ಕೊಟ್ಟರೆ ಪ್ರಮಾಣ ವಚನ ಸ್ವೀಕರಿಸುತ್ತೇನೆ, ಇಲ್ಲವಾದಲ್ಲಿ ಶಾಸಕನಾಗಿ ಮುಂದುವರಿಯುತ್ತೇನೆ ಎಂದಿದ್ದಾರೆ. ಈ ಹಿಂದೆ ಸಚಿವ ಸ್ಥಾನ ಸಿಗದೆ ತೀವ್ರ ಅಸಮಾಧಾನಗೊಂಡಿದ್ದ ಕತ್ತಿ, ಈಗ ಮತ್ತೊಮ್ಮೆ ದೊಡ್ಡ ಶಾಕ್ ಗೆ ಒಳಗಾಗಿದ್ದಾರೆ. ಅವರ ಮುಂದಿನ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ.
ಈ ಮೂವರ ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಬೆಳಗ್ಗೆಯಿಂದಲೇ ತೀವ್ರ ಕಸರತ್ತು ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ