ಅವಧಿ ಪೂರ್ಣಗೊಳಿಸಿದ್ದು ಮೂರೇ ಮೂರು ಜನ!
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೇವಲ ಮೂವರು ಮುಖ್ಯಮಂತ್ರಿಗಳು ಮಾತ್ರ ಪೂರ್ಣ ಐದು ವರ್ಷಗಳ ಕಾಲ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷವೆಂದರೆ, ಆ ಮೂವರು ಸಹ ಕಾಂಗ್ರೆಸ್ ಸದಸ್ಯರಾಗಿದ್ದಾರೆ.
ಎಸ್.ನಿಜಲಿಂಗಪ್ಪ ಅವರು 1962 ರಿಂದ 68 ರವರೆಗೆ, ಡಿ.ದೇವರಾಜ್ ಅರಸು 1972 ರಿಂದ 77 ರವರೆಗೆ ಮತ್ತು ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಮತ್ತು ಜೆಡಿಎಸ್‌ನಿಂದ ಅಧಿಕಾರ ವಹಿಸಿಕೊಂಡ ಯಾವುದೇ ಮುಖ್ಯಮಂತ್ರಿಗಳು ಪೂರ್ಣಾವಧಿಯ ಅಧಿಕಾರ ವಹಿಸಿಕೊಂಡಿಲ್ಲ.
ಕುಮಾರಸ್ವಾಮಿ ಅವರು ಮೊದಲು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಾಗ ಅವರು ಕೇವಲ ಎರಡು ವರ್ಷ ಮಾತ್ರ ಸರ್ಕಾರ ನಿರ್ವಹಿಸಿದ್ದರು. ಅವರು ಫೆಬ್ರವರಿ 2006 ರಿಂದ ಅಕ್ಟೋಬರ್ 2007 ರವರೆಗೆ ಅಧಿಕಾರ ನಿಭಾಯಿಸಿದ್ದರು. ನಂತರ ಅವರು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳಲು ನಿರಾಕರಿಸಿದರು ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಜೊತೆಗೆ ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದರು.
2018 ರ ಮೇನಲ್ಲಿ ಎರಡನೇ ಬಾರಿಗೆ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡರು. ಆದರೆ, ಅವರ ಸರ್ಕಾರ ಇದೇ ಮಂಗಳವಾರ ಅವಿಶ್ವಾಸ ಪರೀಕ್ಷೆಯನ್ನು ಎದುರಿಸಿತು ಮತ್ತು ಅವರ ಸಮ್ಮಿಶ್ರ ಸರ್ಕಾರ ಪತನವಾಯಿತು .
ಬಿಜೆಪಿಯ ವಿಷಯಕ್ಕೆ ಬಂದರೆ ಬಿ.ಎಸ್.ಯಡಿಯೂರಪ್ಪ ಅವರು 2007 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಜೆಡಿಎಸ್ ಬೆಂಬಲವನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಅವರು ಕೇವಲ ಏಳು ದಿನಗಳ ಕಾಲ ಅಧಿಕಾರದಲ್ಲಿದ್ದರು. ಮೇ 2008 ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿತು. ಯಡಿಯೂರಪ್ಪ ಎರಡನೇ ಬಾರಿಗೆ ಸಿಎಂ ಆದರು. ಆದರೆ, ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ 2011 ರ ಜುಲೈನಲ್ಲಿ ಅವರು ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಮೇ 17 ರಿಂದ ಮೇ 23, 2018 ರವರೆಗೆ ಮೂರನೇ ಬಾರಿಗೆ ಯಡಿಯೂರಪ್ಪ ಸಿಎಂ ಆಗಿದ್ದರು.
ಕರ್ನಾಟಕದಲ್ಲಿ ಮೊದಲ ಸರ್ಕಾರ 1956 ರಲ್ಲಿ ರಚನೆಯಾಯಿತು ಮತ್ತು ಅಂದಿನಿಂದ 25 ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿದ್ದಾರೆ. ಅವರಲ್ಲಿ ಹೆಚ್ಚಿನವರು ಕಾಂಗ್ರೆಸ್‌ಗೆ ಸೇರಿದವರು. ಪೂರ್ಣಾವಧಿಯ ಸರ್ಕಾರ ನಡೆಸಿದವರು ಮಾತ್ರ ಮೂರು ನಾಯಕರು. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ