Kannada NewsKarnataka NewsLatest

ಬೆಳಗಾವಿಯಲ್ಲಿರೋದು ಎರಡೇ ಸ್ಟಾರಾ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು– ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ನಾಯಕರಿಂದ ಹಿಡಿದು, ರಾಜ್ಯ ನಾಯಕರು ಹಾಗೂ ಸ್ಥಳೀಯ ನಾಯಕರೂ ಸ್ಟಾರ್ ಪಟ್ಟಿಯಲ್ಲಿ ಸೇರಿದ್ದಾರೆ.

ಆದರೆ 18 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ದೊಡ್ಡ ಜಿಲ್ಲೆ, ರಾಜಕೀಯವಾಗಿ ಅತ್ಯಂತ ಕ್ರಿಯಾಶೀಲವಾಗಿರುವ ಬೆಳಗಾವಿಯಿಂದ ಎರಡೂ ಪಕ್ಷಗಳು ತಲಾ ಒಬ್ಬರನ್ನು ಮಾತ್ರ ಸ್ಟಾರ್ ಪ್ರಚಾರಕರೆಂದು ಗುರುತಿಸಿವೆ.

ಬಿಜೆಪಿಯಿಂದ ಡಾ.ಪ್ರಭಾಕರ ಕೋರೆ ಹಾಗೂ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಾಮಾನ್ಯವಾಗಿ ಬೆಳಗಾವಿ ಜಿಲ್ಲೆಯಿಂದ ಕನಿಷ್ಠ 4 -5 ಜನರು ಸ್ಟಾರ್ ಪ್ರಚಾರಕರೆಂದು ಸ್ಥಾನ ಪಡೆಯುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯ 2 ಸ್ಟಾರ್ ಗಳನ್ನು ಮಾತ್ರ ರಾಜಕೀಯ ಪಕ್ಷಗಳು ಗುರುತಿಸಿರುವುದು ಜಿಲ್ಲೆಗೆ ಮಾಡಿದ ಅನ್ಯಾಯವೆಂದೇ ಹೇಳಬಹುದು.

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಹಲವಾರು ನಾಯಕರಿದ್ದಾರೆ. ಅನೇಕ ವಾಗ್ಮಿಗಳಿದ್ದಾರೆ. ಜಿಲ್ಲೆಯ ಹೊರಗೂ ಹೊಗಿ ಪ್ರಚಾರ ಮಾಡಿ ಮತ ಬೇಟೆ ಮಾಡುವಷ್ಟು ಸಾಮರ್ಥ್ಯ ಉಳ್ಳವರು ಅನೇಕರಿದ್ದಾರೆ. ಆದರೆ ಎರಡೂ ಪ್ರಮುಖ ರಾಜಕೀಯ ಪಕ್ಷಗಳು ಅಂತವರನ್ನು ಗುರುತಿಸಿಲ್ಲ.

ಕಾಂಗ್ರೆಸ್ ನಲ್ಲಿ ಸತೀಶ್ ಜಾರಕಿಹೊಳಿ ಅಲ್ಲದೆ ಲಕ್ಷ್ಮೀ ಹೆಬ್ಬಾಳಕರ್, ಲಕ್ಷ್ಮಣ ಸವದಿ ಉತ್ತಮ ವಾಗ್ಮಿಗಳಾಗಿದ್ದಾರೆ. ಬಿಜೆಪಿಯಲ್ಲಿ ಪ್ರಭಾಕರ ಕೊರೆ ಅಲ್ಲದೆ, ಶಶಿಕಲಾ ಜೊಲ್ಲೆ, ಪಿ.ರಾಜೀವ ಅವರು ಸಹ ಉತ್ತಮ ಮಾತುಗಾರರು. ಇವರೆಲ್ಲ ವಿವಿಧ ಸಂದರ್ಭಗಳಲ್ಲಿ ರಾಜ್ಯದ ಬೇರೆ ಬೇರೆ ಕಡೆ ಹೋಗಿ ಪ್ರಚಾರ ಮಾಡಿದ್ದು, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿಧಾನಸಭೆಯಲ್ಲಿ ನಿರರ್ಗಳವಾಗಿ ಮಾತನಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ಈ ಬಾರಿಯ ವಿಧಾನಸಭೆ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಾತ್ರ ಕೇವಲ ಇಬ್ಬರು ಸ್ಥಾನ ಪಡೆದಿದ್ದಾರೆ.

https://pragati.taskdun.com/lakshmi-hebbalkar-who-wept-at-the-feet-of-chhatrapati-shivaji-maharaj-mla-paid-obeisance-to-rajahansagad-fort-on-the-occasion-of-shiva-jayanti/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button