*ಕಟ್ಟಡದಲ್ಲಿ ಅವಿತು ಕುಳಿತ ಚಿರತೆ; ರಾಜಧಾನಿಯಲ್ಲಿ ಮುಂದುವರೆದ ಆಪರೇಷನ್ ಚಿರತೆ ಕಾರ್ಯಾಚರಣೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕೃಷ್ಣಾ ರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಕಟ್ಟಡದೊಳಗೆ ಅವಿತು ಕುಳಿತಿದ್ದು, ಆತಂಕ ಸೃಷ್ಟಿಸಿದೆ.
ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಕೂಡ್ಲು ಬಳಿಯ ಕೃಷ್ಣಾರೆಡ್ಡಿ ಬಡಾವಣೆಯಲ್ಲಿನ ಪಾಳುಬಿದ್ದಿರುವ ಕಟ್ಟಡದಲ್ಲಿ ಚಿರತೆ ಅವಿತುಕೊಂಡಿದೆ ಎನ್ನಲಾಗಿದೆ. ಬಡಾವಣೆಯ ನಿವಾಸಿಗಳು ಜೀವ ಭಯದಲ್ಲಿ ಕಾಲಕಳೆಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ನಿನ್ನೆಯಿಂದ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.
ಕಟ್ಟಡದಲ್ಲಿ ಬೋನುಗಳನ್ನು ಇಟ್ಟು ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ನಿನ್ನೆ ಸಂಜೆ 7 ಗಂಟೆಯವರೆಗೆ ಕಾರ್ಯಾಚಾರಣೆ ನಡೆಸಿದ್ದರು. ಆದರೆ ಚಿರತೆ ಸೆರೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಟ್ಟಡದ ಕಾಂಪೌಂಡ್ ಮೇಲೆ ನಿಂತಿದ್ದ ಚಿರತೆ ಗೂಬೆ ಹಾರುತ್ತಿದ್ದಂತೆ ಕಟ್ಟಡ ಒಳಗೆ ಜಿಗಿದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿರತೆ ಕಟ್ಟಡದ ಒಳಗೆ ಇರುವ ಸಾಧ್ಯತೆ ಇದ್ದು, ಆಪರೇಷನ್ ಚಿರತೆ ಕಾರ್ಯಾಚರಣೆ ಚುರುಕುಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ