ಸರ್ಕಾರದ ಆದೇಶದಲ್ಲಿನ ನಿಬಂಧನೆಗಳನ್ವಯ ಕಾರ್ಯನಿರ್ವಹಿಸಿ – ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ
ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ*: *ಸರ್ಕಾರದ ಆದೇಶದಲ್ಲಿನ ನಿಬಂಧನೆಗಳನ್ವಯ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತ ಸಮುದಾಯದವರ ಕಾನೂನು ಪದವೀಧರರಿಗೆ ಕಾನೂನು ತರಬೇತಿ ಭತ್ಯೆ ನೀಡಲು ನಡೆಸಿದ ಸಭೆಯ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಸಮಿತಿಯ ಸದಸ್ಯರು ಹಾಗೂ ಅಧ್ಯಕ್ಷರು ಬಾರ್ ಅಸೋಸಿಯೇಷನ್ ಬೆಳಗಾವಿ ಎಸ್.ಎಸ್.ಕಿವಡಸನ್ನವರ, ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪಿ. ಮುರಳಿ ಮೋಹನ ರೆಡ್ಡಿ, ಜಿಲ್ಲಾ ಸರ್ಕಾರಿ ಅಭಿಯೋಜಕ ನಾರಾಯಣ, ಜಿಲ್ಲಾ ಸರ್ಕಾರಿ ವಕೀಲರು ಎಂ ಎಂ ಕಣಗಣಿ, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಡಾ. ಅಬ್ದುಲ ರಶೀದ ಮಿರಜನ್ನವರ ಸೇರಿ ಸರ್ಕಾರದ ಆದೇಶದಲ್ಲಿರುವ ನಿಬಂಧನೆಗಳನ್ವಯ ಸಂದರ್ಶನ ಹಾಗೂ ಶೈಕ್ಷಣಿಕ ವಿದ್ಯಾರ್ಹತೆ ಆಧಾರದ ಮೇಲೆ ಅರ್ಹ 5 ಅಲ್ಪಸಂಖ್ಯಾತರ ಸಮುದಾಯದ ಕಾನೂನು ಪದವೀದರನ್ನು ಕಾನೂನು ತರಬೇತಿ ಭತ್ಯೆ ನೀಡಲು ಆಯ್ಕೆ ಮಾಡಿದರು. ಸದರಿ ಸಭೆಯಲ್ಲಿ ಒಟ್ಟು 10 ಅಲ್ಪಸಂಖ್ಯಾತರ ಕಾನೂನು ಪದವೀಧರರು ಹಾಜರಿದ್ದರು.
ತದ ನಂತರ ಜಿ ಪಂ ಸಿಇಒ ರಾಹುಲ್ ಶಿಂಧೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಆಧಾರ ಸೀಡಿಂಗ್ ಆಗದೇ ಇರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ ಸೀಡಿಂಗ್ ಮಾಡಿಸಿ ತಕ್ಷಣ ವಿದ್ಯಾರ್ಥಿ ವೇತನ ಜಮೆ ಮಾಡುವುದು ಹಾಗೂ ಕ್ರೈಸ್ ಸಂಸ್ಥೆಯಿಂದ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಅವಶ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಅಂದಾಜು ಪತ್ರಿಕೆಗಳನ್ನು 15 ದಿನಗಳ ಒಳಗಾಗಿ ಸಿದ್ದಪಡಿಸಿ, ಜಿಲ್ಲಾ ಪಂಚಾಯತ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಹಾಗೂ 2024-25 ನೇ ಸಾಲಿಗೆ ಭೋಜನಾ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ಪ್ರತಿ ಮಾಹೆಗೆ ರೂ.100/- ಹೆಚ್ಚಿಸಿ ಸರ್ಕಾರದಿಂದ ಆದೇಶವಾಗಿದ್ದು, ಅದರಂತೆ ಹೆಚ್ಚುವರಿ ಬೇಕಾಗುವ ಅನುದಾನದ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಲು ಸಭೆಗೆ ಸೂಚಿಸಿದರು.
2022-23 ನೇ ಸಾಲಿಗೆ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ಮಂಜೂರಾಗಿದ್ದು, ಸದರಿ ಭವನಕ್ಕೆ ತಕ್ಷಣ ನಿವೇಶನ ಪಡೆದುಕೊಂಡು ಇಲಾಖೆಗೆ ಹಂಸ್ತಾತರ ಮಾಡಿಕೊಳ್ಳಲು ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಹುಕ್ಕೇರಿರವರಿಗೆ ಸೂಚಿಸಿದರು. ಈಗಾಗಲೇ ಜಿಲ್ಲಾ ಪಂಚಾಯತ ವತಿಯಿಂದ 02 ಕಂತುಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಅನುದಾನ ಬಿಡುಗಡೆಯಾಗಿದ್ದು ಸದರಿ ಅನುದಾನವನ್ನು ಸರ್ಕಾರದ ನಿಯಮಾನುಸಾರ ನಿಗದಿತ ಅವಧಿಯೊಳಗೆ ಖರ್ಚು ಭರಿಸುವುದು, ತಪ್ಪಿದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವದೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಮಾತನಾಡಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ನಿಯಮಾನುಸಾರ ಇಲಾಖೆಯ ವಸತಿ ನಿಲಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು, ಇಲಾಖೆಯ ವಸತಿ ನಿಲಯಗಳನ್ನು ನಿರ್ಮಿಸಲು ನಿವೇಶನ ಪಡೆಯಲು ಹಾಗೂ ಈಗಾಗಲೇ ನಿವೇಶನ ಇಲಾಖಾ ವಶದಲ್ಲಿದ್ದಲ್ಲಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು ಹಾಗೂ ಹೊಸದಾಗಿ ಮಂಜೂರಾದ ವಸತಿ ನಿಲಯಗಳಿಗೆ ನಿವೇಶನ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಕ್ರಮ ವಹಿಸುವುದು.
ಇಲಾಖಾ ವಸತಿ ನಿಲಯಗಳ ಕಟ್ಟಡಗಳಿಗೆ ತುರ್ತು ರಿಪೇರಿ ಇದ್ದಲ್ಲಿ ಅನಿರ್ಬಂಧಿತ ಅನುದಾನದಡಿ ರಿಪೇರಿ ಕ್ರಮ ಜರುಗಿಸಲು ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಕಟ್ಟಡಗಳ ರಿಪೇರಿಗೆ ಸೂಕ್ತ ಕ್ರಮ ಕೈಗೊಳ್ಳುವುದು, ಹೊರಮೂಲ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಸುವುದಲ್ಲದೇ ಕಾನೂನು ಬದ್ಧವಾಗಿ ಕಟಾವಣೆಗಳನ್ನು ಕಡಿತಗೊಳಿಸಿ ಕ್ರಮ ಬದ್ಧಗೊಳಿಸಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲಾಖೆಯ ಆರ್ಥಿಕ ಪ್ರಗತಿಯು ಕಡಿಮೆಯಾಗಿರುವುದನ್ನು ಗಮನಿಸಿ, ಇಲಾಖೆಯ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ತಿಳಿಸಿದರು.ಇಲಾಖೆಯ ಪ್ರಮುಖ ಯೋಜನೆಯಾದ ವಿದ್ಯಾಸಿರಿ ಮತ್ತು ಶುಲ್ಕು ವಿನಾಯಿತಿ ಯೋಜನೆಗಳ ಫಲಾನುಭವಿಗಳ ಆಧಾರ ಸಿಡಿಂಗ್ ಹಾಗೂ ಡಾಟಾ ಪರಿಶೀಲಿಸಿ ಮಂಜೂರಾತಿಗೆ ತುರ್ತು ಕ್ರಮ ವಹಿಸಲು ಸೂಚಿಸಿದರು.ಇಲಾಖಾ ವಸತಿ ನಿಲಯಗಳ ನಿರ್ವಹಣೆ ಕುರಿತು ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ಮುಂದುವರೆದು, ಇಂದಿನ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿ, ಮುಂದಿನ ಪ್ರಗತಿ ಪರಿಶೀಲನಾ ಸಭೆ ಒಳಗಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಿ, ಎಲ್ಲ ಅವಶ್ಯಕ ಮಾಹಿತಿಗಳ ಬುಕಲೆಟ್ನೊಂದಿಗೆ ಸಭೆಗೆ ಹಾಜರಿರಲು ಸಂಬಂಧಿಸಿದ ಜಿಲ್ಲಾ/ತಾಲೂಕ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಡಾ. ಅಬ್ದುಲ ರಶೀದ ಮಿರಜನ್ನವರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ್ ಕುರಿಹುಲಿ, ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶಿವಪ್ರಿಯಾ ಕಡೆಚೂರ ಹಾಗೂ ಸಂಬಂಧಿಸಿದ ಎಲ್ಲ ತಾಲೂಕಾ ಮಟ್ಟದ ಅಧಿಕಾರಿಗಳು/ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ