ಪ್ರಗತಿವಾಹಿನಿ ಸುದ್ದಿ, ಮುಂಬೈ:
ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ನಡೆಯುತ್ತಿದೆ. ಸುಮಾರು 25ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಸರಿಯುತ್ತಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಮುನ್ನ ನಡೆಯುತ್ತಿರುವ ಆಪರೇಶನ್ ಕಮಲ ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡುತ್ತಿದೆ.
ಸುಮಾರು 25 ಶಾಸಕರು ಸದ್ಯ ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ, ಈ ಬಗ್ಗೆ ಮಾತುಕತೆ ಜಾರಿಯಲ್ಲಿದೆ ಎಂದು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.
ಅಲ್ಲದೆ ಹಲವು ಎನ್ ಸಿಪಿ ಮುಖಂಡರು ಕೂಡಾ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಾಗೂ ಎನ್ ಸಿಪಿಗೆ ಸೇರಿದ ಸುಮಾರು 25 ಶಾಸಕರು ನನ್ನ ಬಳಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಲವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಬಗ್ಗೆ ಖಚಿತಪಡಿಸಿಕೊಂಡಿದ್ದೇನೆ, ಇನ್ನು ಕೆಲವರು ಫೋನ್ ಮೂಲಕ, ಮೂರನೆ ವ್ಯಕ್ತಿಗಳ ಮೂಲಕ ಸಂದೇಶ ಕಳಿಸಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ವೇಳೆಯಲ್ಲಿ ಟಿಕೆಟ್ ಹಂಚಿಕೆಯಿಂದ ಅನೇಕ ಕಾಂಗ್ರೆಸ್ಸಿಗರು ಬೇಸರಗೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ನಡುವಿನ ತಿಕ್ಕಾಟದ ಲಾಭ ಬಿಜೆಪಿಗೆ ಸಿಗುವ ಲಕ್ಷಣಗಳಿವೆ.
ಕಾಂಗ್ರೆಸ್ಸಿನಿಂದ ಅಸಮಾಧಾನಗೊಂಡಿರುವ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಬಿಜೆಪಿ ಸೇರುವುದು ಖಚಿತವಾಗಿದೆ. ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡ ಶಾಸಕ ಅಬ್ದುಲ್ ಸತ್ತಾರ್ ಅವರು ಬಿಜೆಪಿ ಸೇರುವ ಸುಳಿವು ಸಿಕ್ಕಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ್ ಅವರಿಗೆ ಭಾರಿ ಆಘಾತ ಕಾದಿದೆ. 2019ರ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಯನ್ನು ಮಹಾರಾಷ್ಟ್ರ ಎದುರಿಸಲಿದ್ದು, ಅಷ್ಟರಲ್ಲಿ ಕಾಂಗ್ರೆಸ್- ಎನ್ ಸಿಪಿ ಬಲ ಕುಗ್ಗಿಸುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ.
ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ವಿಖೆ ಪಾಟೀಲ್ ಕುಟುಂಬದವರು ಎನ್ ಸಿಪಿ ಮುಖಂಡ ಶರದ್ ಪವಾರ್ ಅವರ ಸ್ವಜನಪಕ್ಷಪಾತವನ್ನು ಖಂಡಿಸಿ, ಕಾಂಗ್ರೆಸ್ ತೊರೆದಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸುಜಯ್ ಅವರ ಹಾದಿಯಲ್ಲೇ ಸಾಗಿದ ಅವರ ತಂದೆ ರಾಧಾಕೃಷ್ಣ ವಿಖೆ ಪಾಟೀಲ್ ಅವರನ್ನು ಜೂನ್ ತಿಂಗಳಿನಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಲು ದೇವೇಂದ್ರ ಫಡ್ನವೀಸ್ ಮುಂದಾಗಿದ್ದಾರೆ.
ಕಾಂಗ್ರೆಸ್ ವಿಪಕ್ಷ ನಾಯಕರ ಮಗ ಸುಜಯ್ ಅವರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ 7 ಬಾರಿ ಶಾಸಕರಾಗಿರುವ ಕಾಳಿದಾಸ್ ಕೊಲಂಬ್ಕರ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ದೇವೇಂದ್ರ ಫಡ್ನವೀಸ್ ಗೆ ನನ್ನ ಬೆಂಬಲ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ