*ಮರಾಠಾ ಸಮಾಜದ ಸಂಘಟನೆ ಅಗತ್ಯ: ಕಿರಣ ಜಾಧವ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮರಾಠಾ ಭಾಷಿಕರ ಅಭ್ಯುದಯಕ್ಕೆ ಸಂಘಟಿತ ಪ್ರಯತ್ನ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಮರಾಠ ಸಮಾಜದ ಯುವ ಮುಖಂಡ ಕಿರಣ ಕಿರಣ ಜಾಧವ ಅಭಿಪ್ರಾಯಪಟ್ಟರು.
ಮರಾಠ ಮೀಸಲಾತಿಯನ್ನು 3 ಬಿ ಯಿಂದ 2 ಎಗೆ ಸೇರಿಸಬೇಕು ಎನ್ನುವುದು ಸೇರಿದಂತೆ ಸಮುದಾಯದವರ ಹಿತಾಸಕ್ತಿ ಬೇಡಿಕೆಗಳ ಬಗ್ಗೆ ಒಮ್ಮತ ಮೂಡಲು ಬೆಳಗಾವಿ ಉತ್ತರದ ಪ್ರಮುಖ ಮರಾಠ ಸಮುದಾಯದ ಸಭೆಯು ನಡೆಯಿತು. ಸಭೆಯಲ್ಲಿ ಮಾತನಾಡಿದ ಕಿರಣ ಜಾಧವ ಅವರು, ಮರಾಠರನ್ನು 3 ಬಿಯಲ್ಲಿ ಎಣಿಸಲಾಗುತ್ತದೆ. 2 ಎಯಲ್ಲಿ ಸೇರಿಸಿದರೆ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ. ಮೇಲಾಗಿ ಮರಾಠ ಸಮಾಜದವರಿಗೆ ಇತರೆ ಸರಕಾರಿ ಸೌಲಭ್ಯಗಳ ನೇಮಕಾತಿಗೆ ಅನುಕೂಲವಾಗಲಿದೆ. ಮರಾಠ ಸಮಾಜದವರೆಲ್ಲರೂ ಸಂಘಟಿತರಾಗಿ ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಮರಾಠ ಸಮುದಾಯದ ಮೀಸಲಾತಿ ವಿಚಾರವನ್ನು ನಿರ್ಲಕ್ಷಿಸಲಾಗಿದೆ. ಇದಕ್ಕೆ ರಾಜಕೀಯ ನಿರಾಸಕ್ತಿಯೇ ಕಾರಣ. ಇದನ್ನು ಗಂಭೀರವಾಗಿ ಪರಿಗಣಿಸಿ ಮರಾಠ ಸಮುದಾಯವನ್ನು 3ಬಿಯಿಂದ 2ಎಗೆ ಸೇರಿಸುವಂತೆ ಮರಾಠ ಸಮುದಾಯದವರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಮರಾಠ ಸಮುದಾಯದವರನ್ನು ಸಂಘಟಿಸಿ ಚಳವಳಿಗೆ ಇಯಲು ಸಿದ್ಧತೆ ನಡೆಸಬೇಕಿದೆ. ಆ ನಿಟ್ಟಿನಲ್ಲಿ ಈ ಚಿಂತನಾ ಸಭೆ ಆಯೋಜಿಸಲಾಗಿದೆ ಎಂದು ಕಿರಣ ಜಾಧವ್ ತಿಳಿಸಿದರು.
ಮರಾಠ ಸಮಾಜದ ಉನ್ನತಿಗಾಗಿ ಸಮಾಜದವರನ್ನು ಒಗ್ಗೂಡಿಸುವಂತೆ ಬೆಳಗಾವಿ ಜಿಲ್ಲೆಯ ಮರಾಠ ಸಮಾಜದ ಪ್ರಮುಖ ಗಣ್ಯರಲ್ಲಿ ಕಿರಣ ಜಾಧವ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೀರ ಶಿವಾಜಿ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕಮಲೇಶರಾವ್ ಫಡತಾರೆ (ಬೆಂಗಳೂರು) ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸುನೀಲ ಜಾಧವ, ರಾಹುಲ್ ಮುಚ್ಚಂಡಿ, ರಾಜನ್ ಜಾಧವ, ಸೀಮಾ ಪವಾರ, ಪ್ರಜ್ಞಾ ಶಿಂಧೆ, ಪ್ರವೀಣ ಪಾಟೀಲ ಸೇರಿದಂತೆ ಉತ್ತರ ಭಾಗದ ಮರಾಠ ಸಮಾಜದದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ