ಎಂದೆಂದಿಗೂ ನಮ್ಮ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ
ಎಂ.ಕೆ.ಹೆಗಡೆ, ಬೆಳಗಾವಿ –
ಗೋಕಾಕದ ಜಾರಕಿಹೊಳಿ ಕುಟುಂಬ ರಾಜ್ಯ ರಾಜಕಾರಣದಲ್ಲಿ ನಿರಂತರ ಸುದ್ದಿಯಲ್ಲಿರುವ ಕುಟುಂಬ.
ಹೊಸ ಸರಕಾರ ಅಸ್ಥಿತ್ವಕ್ಕೆ ಬರಲಿ, ಇರುವ ಸರಕಾರ ಬೀಳಲಿ, ಚುನಾವಣೆ ಘೋಷಣೆಯಾಗಲಿ, ರಾಜ್ಯ ರಾಜಕೀಯದಲ್ಲಿ ಏನೇ ಬೆಳವಣಿಗೆ ನಡೆಯಲಿ ಜಾರಕಿಹೊಳಿ ಕುಟುಂಬ ಸುದ್ದಿಯಲ್ಲಿರುತ್ತದೆ.
ಕುಟುಂಬದ ಮೂವರು ಹಾಲಿ ಶಾಸಕರು (ಒಬ್ಬರು ಸಧ್ಯ ಅನರ್ಹರಾಗಿದ್ದಾರೆ). 2004ರಿಂದಲೂ ನಿರಂತರವಾಗಿ ಕುಟುಂಬದ ಒಬ್ಬರು ಸಚಿವರಾಗಿದ್ದುಕೊಂಡೇ ಬರುತ್ತಿದ್ದಾರೆ. ಯಾವ ಸರಕಾರ ಬಂದರೂ ಈ ಸಹೋದರರನ್ನು ಕಡೆಗಣಿಸಲು ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ಇದೆ.
ಆದರೆ ಸಧ್ಯದ ಬಿಜೆಪಿ ಸರಕಾರ ಜಾರಕಿಹೊಳಿ ಕುಟುಂಬವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಕುಟುಂಬದ ಯಾರೊಬ್ಬರಿಗೂ ಸಧ್ಯ ಸಚಿವಸ್ಥಾನ ನೀಡಿಲ್ಲ. ಕುಟುಂಬದ ವಿರೋಧಿ ಗುಂಪಿನ ಲಕ್ಷ್ಮಣ ಸವದಿಯನ್ನು ಶಾಸಕರಲ್ಲದಿದ್ದರೂ ಮಂತ್ರಿ ಮಾಡಿ, ಉಪಮುಖ್ಯಮಂತ್ರಿಯನ್ನಾಗಿಯೂ ಮಾಡಲಾಗಿದೆ.
ರಮೇಶ ಜಾರಕಿಹೊಳಿ ಅನರ್ಹತೆಯಿಂದ ಮುಕ್ತರಾದರೆ ಸಚಿವಸಂಪುಟ ಸೇರಬಹುದು. ಬಾಲಚಂದ್ರ ಜಾರಕಿಹೊಳಿ ಕರ್ನಾಟಕ ಹಾಲುಮಹಾಮಂಡಳಿ ಚೇರಮನ್ ಆಗಬಹುದು. ಸತೀಶ್ ಜಾರಕಿಹೊಳಿ ಹಿಂದಿನ ಸರಕಾರದಲ್ಲಿ ಮಂತ್ರಿಯಾಗಿದ್ದರು.
ಆದರೆ, ದೇವರು ಮತ್ತು ನಮ್ಮ ಕ್ಷೇತ್ರದ ಮತದಾರರ ಆಶಿರ್ವಾದ ಇರುವವರೆಗೆ ನಮ್ಮ ಕುಟುಂಬವನ್ನು ಯಾರಿಂದಲೂ ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಹಿಂದಿನ ಸಮ್ಮಿಶ್ರ ಸರಕಾರ ಬೀಳಲು ರಮೇಶ ಜಾರಕಿಹೊಳಿಯೇ ಕಾರಣ ಎನ್ನುವುದು ಬಹಿರಂಗವಾಗಿದೆ. ಒಮ್ಮೆ ಕೈ ಹಾಕಿದರೆ ಅದು ಪೂರ್ಣಗೊಳ್ಳುವವರೆಗೆ ಹಿಂದೆ ಸರಿಯುವುದಿಲ್ಲ ಎನ್ನುವುದನ್ನು ರಮೇಶ ಜಾರಕಿಹೊಳಿ ತೋರಿಸಿದ್ದಾರೆ.
ಅಭಿಯಾನ
ಸುಮಾರು ಒಂದು ವರ್ಷದ ಹಿಂದೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಅವರು ಮುಖ್ಯಮಂತ್ರಿಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೆ, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಹೆಸರು ಕೇಳಿಬರುತ್ತಿತ್ತು. ಆ ಸಂದರ್ಭದಲ್ಲೇ ಸತೀಶ್ ಜಾರಕಿಹೊಳಿ ಕುರಿತೂ ಚರ್ಚೆ ನಡೆದಿತ್ತು.
ಬಾದಾಮಿಯಲ್ಲಿ ಚುನಾವಣೆ ನಡೆದ ವೇಳೆ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಒಂದಲ್ಲ ಒಂದು ದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಇದನ್ನೇ ಆಧರಿಸಿ ಅವರ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದರು.
ಆ ವೇಳೆ ರಮೇಶ ಜಾರಕಿಹೊಳಿ ಕೂಡ, ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣುವುದು ನನ್ನ ಕನಸು. ಇಂದಲ್ಲ ನಾಳೆ ಅದನ್ನು ಮಾಡಿಯೇ ತೀರುತ್ತೇನೆ ಎಂದಿದ್ದರು.
ಸಮುದಾಯಕ್ಕೆ ಕಿರೀಟ
ಈಗ ಮತ್ತೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು, ಎಂದೆಂದಿಗೂ ನಮ್ಮ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅಭಿಯಾನವನ್ನು ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಭಿಯಾನ ಶುರುವಾಗಿದ್ದು, ವಾಲ್ಮೀಕಿ ನಾಯಕ ಸಮುದಾಯದವರೆಲ್ಲ ಕೈ ಜೋಡಿಸಿ ಎಂದು ಕರೆ ನೀಡಲಾಗಿದೆ.
“ತಿಳಿದುಕೊಳ್ಳಿ ಮಾನ್ಯ ವಾಲ್ಮೀಕಿ ನಾಯಕ ಬಂದುಗಳೇ ಮುಂದೆ ನಾಯಕ ಸಮಾಜದಲ್ಲಿ ಏನಾದರೂ ರಾಜ್ಯದ ಚುಕ್ಕಾಣಿ ಹಿಡಿಯಬೇಕಾದರೆ ಮಾನ್ಯ ಸತೀಶ್ ಜಾರಕಿಹೊಳಿ ಅವರಿಂದ ಮಾತ್ರ ಸಾಧ್ಯ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯ ಸತೀಶ್ ಜಾರಕಿಹೊಳಿಯವರ ಬೆನ್ನಿಗೆ ನಿಂತರೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಭರವಸೆ ರಾಜ್ಯದ ಜನತೆಗೆ ಇದೆ…
…ನಮ್ಮ ನೆಚ್ಚಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನುಡಿದಿದ್ದಾರೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕೆಂದು ಅವರ ಆಸೆಯಂತೆ ನಮ್ಮ ನಾಯಕ ಪ್ರಭಾವಿ ಸತೀಶ್ ಜಾರಕಿಹೊಳಿಯವರ ಆದೇಶದಂತೆ ನಡೆದರೆ ನಮ್ಮ ಸಮುದಾಯಕ್ಕೆ ಕಿರೀಟ ಸಿಕ್ಕಂತೆ ಆಗುತ್ತದೆ…
… ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿ ಸುಮಾರು ಎರಡೂವರೆ ಎಕರೆಯಲ್ಲಿ ವಾಲ್ಮೀಕಿ ಭವನವನ್ನ ನಿರ್ಮಿಸಿದ ಕೀರ್ತಿ ಧೀಮಂತ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಶೇ. 7.5 ಮೀಸಲಾತಿಗೆ ಹೋರಾಟ ಮಾಡಿದ ಕೀರ್ತಿ ಧೀಮಂತ ನಾಯಕ ಸತೀಶ್ ಜಾರಕಿಹೊಳಿಗೆ ಸಲ್ಲುತ್ತದೆ…
…ಇಂತಹ ಒಬ್ಬ ಶಕ್ತಿಯನ್ನ ನಾಯಕ ಸಮಾಜ ಎಲ್ಲೂ ಕಾಣಲು ಸಾಧ್ಯವಿಲ್ಲ. ದಯಮಾಡಿ ನಾಯಕ ಸಮಾಜದ ಬಂಧುಗಳೇ ಪ್ರೀತಿಸಿ ಪ್ರೋತ್ಸಾಹಿಸಿ. ಎಂದೆಂದಿಗೂ ನಮ್ಮ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅಭಿಯಾನವನ್ನು ಪ್ರಾರಂಭ ಮಾಡಿದ್ದೇವೆ. ಕೈಜೋಡಿಸಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡೋಣ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ.
ನಾವು ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳೆಲ್ಲ ಸೇರಿ ಈ ಅಭಿಯಾನ ನಡೆಸುತ್ತಿದ್ದೇವೆ. ಅವರನ್ನು ಮುಖ್ಯಮಂತ್ರಿ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎನ್ನುತ್ತಾರೆ ಅವರ ಅಭಿಮಾನ ಗರಣಿ ಗಿರೀಶ್.
ಬಿಜೆಪಿ ಸರಕಾರ ಈಗಷ್ಟೆ ಅಸ್ಥಿತ್ವಕ್ಕೆ ಬರುತ್ತಿರುವ ಸಂದರ್ಭದಲ್ಲಿ, ಜಾರಕಿಹೊಳಿ ಕುಟುಂಬವನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದ ಬೆನ್ನಲ್ಲೆ ಈ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿದೆ.(ಪ್ರಗತಿವಾಹಿನಿ ಸುದ್ದಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ