ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
18 ವರ್ಷ ಒಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಯುವ ದೃಷ್ಟಿಯಿಂದ ಪೊಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಾಗಾಗಿ ಜನರಿಗೆ ಈ ಕಾಯ್ದೆ ಬಗ್ಗೆ ಹೆಚ್ಚು ಮನವರಿಕೆ ಮಾಡುವುದು ನಮ್ಮ ಮುಖ್ಯ ಉದ್ದೇಶ ಎಂದು ರಾಜ್ಯ ಗೃಹ ಸಚಿವರಾದ ಎಂ.ಬಿ ಪಾಟೀಲ ಅವರು ಹೇಳಿದರು.
ಸೋಮವಾರ ( ಜುಲೈ ೧) ನಗರದ ಜಿಲ್ಲಾ ಪೊಲೀಸ್ ಕೇಂದ್ರಸ್ಥಾನದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ಮಾಡಿದ ನಂತರ ನಗರದ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವರದಕ್ಷಣೆ ಕಿರುಕುಳದಿಂದ ಅನೇಕ ಮಹಿಳೆಯರು ಸಾವಿಗಿಡಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಅದನ್ನು ತಡೆಯಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಾದ ಕ್ರಮ ಜರುಗಿಸಲು ಹೇಳಿದರು.
ಅಪರಾಧವನ್ನು ತಡೆಯುವುದು ನಮ್ಮ ಪ್ರಮುಖ ಉದ್ದೇಶ ಹಾಗೂ ಅಪರಾಧವನ್ನು ತಡೆಯುವುದರಲ್ಲಿ ಪೊಲೀಸ್ ಇಲಾಖೆಯು ತನ್ನ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎಂದರು.
ಸರಗಳ್ಳತನ, ರಾಬರಿ ಮಾಡುವುದು, ದನಕರುಗಳ ಕಳ್ಳತನ, ಬೈಕ್, ಕಾರು ಮುಂತಾದವುಗಳ ಹೆಚ್ಚಾಗಿ ಕಳುವಾಗುತ್ತಿದ್ದು, ಆದಷ್ಟು ಬೇಗ ಅದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಔರಾದ್ಕರ್ ವರದಿಯಲ್ಲಿ ಪ್ರಮುಖವಾದ ಅಂಶಗಳನ್ನು ಜಾರಿ ಮಾಡಿ ಪೊಲೀಸರಿಗೆ ನ್ಯಾಯ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಈಗಾಗಲೇ ಚರ್ಚೆ ಮಾಡಲಾಗಿದೆ ಎಂದರು.
ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪ್ರತಿಯೊಂದು ಗ್ರಾಮದ ಯೋಗಕ್ಷೇಮವನ್ನು ವಿಚಾರಣೆ ಮಾಡಿ, ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಜಾಗೃತಿ ಸಭೆಗಳನ್ನು ಮಾಡಬೇಕು ಎಂದರು.
ಪೊಲೀಸ್ ಇಲಾಖೆಯನ್ನು ಸುಧಾರಣೆ ಮಾಡುವುದಕ್ಕೆ ಬೇರೆ ಬೇರೆ ರಾಜ್ಯದ ಮಾದರಿಗಳನ್ನು ಅಳವಡಿಸಲಾಗುವದು.
ಆಡಳಿತದ ಒಳತಿಗಾಗಿ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಪಿ.ಎಸ್.ಐ ಗಳನ್ನು ನೇಮಕ ಮಾಡಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಖಾಲಿ ಇರುವ ಸುಮಾರು ೨೫ ಸಾವಿರ ಕಾನ್ಸಟೇಬಲ್ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ರಾಜ್ಯ ಸರ್ಕಾರದ ಮುಖ್ಯ ಸಚೇತಕರಾದ ಗಣೇಶ ಹುಕ್ಕೇರಿ, ಬೆಳಗಾವಿ ಗ್ರಾಮೀಣ ಭಾಗದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಕಾಗವಾಡ ಶಾಸಕಾರದ ಶ್ರೀಮಂತ ಪಾಟೀಲ, ಉತ್ತರ ವಲಯದ ಪೊಲೀಸ್ ಮಹಾನಿರಿಕ್ಷಕರಾದ ಎಚ್.ಜಿ ರಾಘವೇಂದ್ರ ಸುಹಾಸ್, ಪೊಲೀಸ್ ಆಯುಕ್ತ ಬಿ.ಎಸ್ ಲೋಕೇಶಕುಮಾರ್, ಪೊಲೀಸ್ ಅಧೀಕ್ಷಕರಾದ ಸುಧೀರಕುಮಾರ್ ರೆಡ್ಡಿ, ಡಿಸಿಪಿ ಸೀಮಾ ಲಾಠ್ಕರ್, ಯಶೋಧಾ ವಂಟಗೋಡಿ, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ