
ಪ್ರಗತಿವಾಹಿನಿ, ಖಾನಾಪುರ
ಖಾನಾಪುರ ತಾಲೂಕಿನ 40 ಶಾಲೆಗಳನ್ನು ಇ-ಶಾಲೆ ಯೋಜನೆಗೆ ಆಯ್ಕೆ ಮಾಡಿರುವ ಶಾಸಕಿ ಅಂಜಲಿ ನಿಂಬಾಳಕರ್, ಶುಕ್ರವಾರ ತಾಲೂಕಿನ ಬೀಡಿಯಲ್ಲಿ ಯೋಜನೆ ಉದ್ಘಾಟಿಸಿದರು.
ಮೆಂಡಾ ಫೌಂಡೇಶನ್ ಮತ್ತು ಶಾಸಕರ ನಿಧಿಯ ತಲಾ ಶೇ.50ರ ಹಣದಲ್ಲಿ ಯೋಜನೆ ಜರಿಗೊಳಿಸಲಾಗುತ್ತಿದೆ. ಈ ವರ್ಷ ಇ ಶಾಲೆ ಯೋಜನೆಗೆ 20 ಲಕ್ಷ ರೂ. ನೀಡುವುದಾಗಿ ಅಂಜಲಿ ತಿಳಿಸಿದರು.

” ಇ- ಕಲಿಕಾ ಯೋಜನೆ ನನ್ನ ಕನಸು. ಪ್ರಭುನಗರ ಶಾಲೆಯಲ್ಲಿ ಮೊದಲು ನೋಡಿದಂದಿನಿಂದ ನಮ್ಮ ಇಡೀ ತಾಲಿಕಿನಲ್ಲಿ ವಿಸ್ತರಿಸಬೇಕೆಂದು ಸೆಲ್ಕೊ ಸಂಸ್ಥೆ ಮತ್ತು ಮೆಂಡಾ ಫೌಂಡೇಶನ್ ಜೊತೆ ಒಂದು ವರ್ಷದಿಂದ ಸತತ ಚರ್ಚಿಸಿ ಜಾರಿಗೊಳಿಸಿದ್ದೇನೆ. ತಗಲುವ ವೆಚ್ಚ 90 ಸಾವಿರ ರೂ.ಗಳಲ್ಲಿ ಅರ್ಧ ಶಾಸಕರ ನಿಧಿ ಮತ್ತು ಉಳಿದರ್ಧ ಮೆಂಡಾದವರ ಸಹಕಾರದಲ್ಲಿ ಮೊದಲ ಹಂತದಲ್ಲಿ 40 ಶಾಲೆಗಳಲ್ಲಿ ಪ್ರಾರಂಭಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಜಾತಿ ಮತ್ತು ಭಾಷೆ ಭೇದವಿಲ್ಲದೆ ಪ್ರಾಮಾಣಿಕ ಸೇವೆ ಮಾಡುವ ಉದ್ದೇಶ ಹೊಂದಿದ್ದೇನೆ. ಮರಾಠಿ ಭಾಷೆಯಲ್ಲೂ ಕೂಡಾ ಮುಂದಿನ ದಿನಗಳಲ್ಲಿ ಸರ್ಕಾರದ ಸಹಕಾರದಿಂದ ಮಾಡುತ್ತೇವೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವ ಯಾವುದೇ ಮಾತಿಲ್ಲ ಮತ್ತು ತಮಗೆ ಅದು ಬೇಕಾಗಿಯೂ ಇಲ್ಲ. ಇಡೀ ಕ್ಷೇತ್ರದ ಏಳಿಗೆಯೇ ತಮ್ಮ ಉದ್ದೇಶ “ಎಂದು ನಿಂಬಾಳಕರ್ ಹೇಳಿದರು.
ಬೀಡಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇ ಶಾಲಾ ಉದ್ಘಾಟನೆ ಜೊತೆಗೆ ಸಮವಸ್ತ್ರ ವಿತರಣೆ, ನೋಟ್ ಬುಕ್ ವಿತರಣೆ ಸಹ ನಡೆಯಿತು. ಮೆಂಡಾ ಫೌಂಡೇಶನ್ ನ ಚತ್ರು ಮೆಂಡಾ, ಸೆಲ್ಕೋ ಎಜಿಎಂ ಸುಧಿಪ್ತಾ ಘೋಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ರಾವ್ ಯಕ್ಕುಂಡಿ,
ಖಾನಾಪುರ ಬಿ.ಇ.ಒ., ಕಕ್ಕೇರಿ ಜಿ.ಪಂ. ಸದಸ್ಯರು ಇದ್ದರು.
ಪ್ರಾಸ್ತಾವಿಕ ಮಾತನಾಡಿದ ಸೆಲ್ಕೊ ಸಂಸ್ಥೆಯ ಪಾರ್ಥ ಸಾರಥಿ ” ಇ ಶಾಲಾ ಒಂದು ವಿಶೇಷ ಕಲಿಕಾ ಯೋಜನೆಯಾಗಿದ್ದು ಇಂತಹ ಅನೇಕ ಕುಗ್ರಾಮಗಳಲ್ಲೂ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನಿಡುವಲ್ಲಿ ಸಹಕಾರಿಯಾಗಿದೆ. ಯೋಜನೆಯನ್ನು ಈ ಭಾಗದಲ್ಲಿ ತಂದ ಶಾಸಕರು ಮತ್ತು ಮೆಂಡಾ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.




