*ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯ, ಕನಿಷ್ಠ ವೇತನ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯಗಳು ಮತ್ತು ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ಮತ್ತಿತರ ಸೌಲಭ್ಯಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಇಲಾಖೆಯ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳು ಮತ್ತು ಕಾರ್ಮಿಕ ಕಾಯ್ದೆ ಅರಿವು ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜು.೧೧) ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊರಗುತ್ತಿಗೆ ನೌಕರರಿಗೆ ಶಾಸನಬದ್ಧ ಸೌಲಭ್ಯ ಹಾಗೂ ನಿಯಮಾವಳಿ ಪ್ರಕಾರ ಕನಿಷ್ಠ ವೇತನ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಕೆಲವೆಡೆ ಹೊರಗುತ್ತಿಗೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಗುತ್ತಿಗೆದಾರರು ನೀಡುತ್ತಿಲ್ಲ. ಗುತ್ತಿಗೆದಾರರು ಸೇವಾಶುಲ್ಕವನ್ನು ಮಾತ್ರ ಕಡಿತ ಮಾಡಬೇಕು. ಉಳಿದಂತೆ ನೌಕರರಿಗೆ ದೊರಕಬೇಕಾದ ಸೌಲಭ್ಯ ಒದಗಿಸಬೇಕು. ಸೇವಾಶುಲ್ಕ ಹೊರತುಪಡಿಸಿ ಇತರೆ ಯಾವುದೇ ಅನಧಿಕೃತ ವೇತನ ಕಡಿತವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನೌಕರರ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡಬೇಕು:
ಪ್ರತಿಯೊಬ್ಬ ಹೊರ ಗುತ್ತಿಗೆ ನೌಕರರು ಕಡ್ಡಾಯವಾಗಿ ಭವಿಷ್ಯ ನಿಧಿ, ಇ.ಎಸ್.ಐ ಮತ್ತಿತರ ಖಾತೆಗಳನ್ನು ಹೊಂದಿರುವುದನ್ನು ಕೂಡ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಹೊರ ಗುತ್ತಿಗೆ ನೌಕರರ ವೇತನವು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವಂತೆ ಹೊರ ಗುತ್ತಿಗೆ ನೀಡಿರುವ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಮೂಲ ವೇತನ ಮತ್ತು ತುಟ್ಟಿಭತ್ಯೆ ಪಾವತಿಗೆ ಅವಕಾಶ:
ಹೊರಗುತ್ತಿಗೆ ಕಾರ್ಮಿಕರಿಗೆ ಮೂಲ ವೇತನ ಹಾಗೂ ತುಟ್ಟಿಭತ್ಯೆಯನ್ನು ಪಾವತಿಸಬೇಕಾಗುತ್ತದೆ. ಈ ವೇತನದಲ್ಲಿ ಇಎಸ್ ಐ, ಪಿಎಫ್, ವೃತ್ತಿ ತೆರಿಗೆಯನ್ನು ಕಟಾಯಿಸಿ ನಿವ್ವಳ ವೇತನವನ್ನು ಪಾವತಿಸಬೇಕು ಎಂದು ಕಾರ್ಮಿಕ ಇಲಾಖೆಯ ಉಪ ಆಯುಕ್ತರಾದ ಡಿ.ಜಿ. ನಾಗೇಶ್ ಅವರು ತಿಳಿಸಿದರು.
ಕನಿಷ್ಠ ವೇತನ, ತುಟ್ಟಿ ಭತ್ಯೆ ನೀಡಬೇಕು ಎಂಬುದು ಕನಿಷ್ಠ ವೇತನ ಕಾಯ್ದೆಯಲ್ಲಿದೆ. ಪ್ರತಿ ವರ್ಷ ಏಪ್ರಿಲ್ ಮಾಹೆಯಿಂದ ಇದು ಪರಿಷ್ಕರಣೆ ಮಾಡಿ ತುಟ್ಟಿ ಭತ್ಯೆಯನ್ನು ಸೇರಿಸಿ ವೇತನವನ್ನು ನೀಡಬೇಕು.
ಪ್ರತಿ ತಿಂಗಳು ೭ ಹಾಗೂ ೧೦ ನೇ ತಾರೀಖಿನೊಳಗೆ ಬ್ಯಾಂಕ್ ಮೂಲಕ ಅವರ ಖಾತೆಗೆ ಜಮೆ ಮಾಡಬೇಕು. ವೇತನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು. ವೇತನ ಪಾವತಿ ವಿಳಂಬಗೊಳಿಸಿದರೆ ಕಾನೂನು ಪ್ರಕಾರ ಕ್ರಮವನ್ನು ತೆಗೆದುಕೊಳ್ಳಬಹುದು.
ವೇತನ ವಿಳಂಬ ತಪ್ಪಿಸಲು ಕೆಲ ಷರತ್ತುಗಳನ್ನು ಟೆಂಡರ್ ದಾಖಲೆಗಳಲ್ಲಿ ನಮೂದಿಸಿರಬೇಕು. ಗುತ್ತಿಗೆದಾರ ವೇತನ ಪಾವತಿ ವಿಳಂಬ ಮಾಡಿದರೆ ಅಥವಾ ವೇತನವನ್ನು ಭಾಗಶಃ ಅಥವಾ ಪೂರ್ಣ ಪಾವತಿ ಮಾಡದಿದ್ದರೆ ಸಂಬAಧಿಸಿದ ಇಲಾಖೆಯೇ ಇದಕ್ಕೆ ಹೊಣೆಯಾಗುತ್ತದೆ.
ಮಹಿಳೆ ಮತ್ತು ಪುರುಷ ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವಾಗ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಯಾವುದೇ ಕಾರಣಕ್ಕೂ ವೇತನ ತಾರತಮ್ಯವನ್ನು ಮಾಡುವುದು ಕಾನೂನುಬಾಹಿರ ಎಂದು ತಿಳಿಸಿದರು.
ಹೊರಗುತ್ತಿಗೆ ನೌಕರರ ಸೇವೆ ಪಡೆಯುವಾಗ ಗುತ್ತಿಗೆದಾರರು ಕನಿಷ್ಠ ವೇತನವನ್ನು ಕಡ್ಡಾಯವಾಗಿ ನೀಡಬೇಕು ಎಂಬುದನ್ನು ಟೆಂಡರ್ ನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದು ನಾಗೇಶ್ ಹೇಳಿದರು.
ಇದಾದ ಬಳಿಕ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳು, ಇ.ಎಸ್.ಐ., ಭವಿಷ್ಯ ನಿಧಿ ಮತ್ತಿತರ ಸೌಲಭ್ಯಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಾದ ಶಿವಕುಮಾರ್ ಹಾಗೂ ಸುನಿಲ್ ಅವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ(ಆಡಳಿತ) ಬಸವರಾಜ ಹೆಗ್ಗನಾಯಕ, ಸಹಾಯಕ ಕಾರ್ಮಿಕ ಆಯುಕ್ತರಾದ ಅನ್ಸಾರಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ತರನ್ನುಂ ಬಂಗಾಲಿ, ಮಲ್ಲಿಕಾರ್ಜುನ ಜೋಗೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ