ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಜಗದೀಶ್ ಶೆಟ್ಟರ್ ಭಾನುವಾರ ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಜಿಲ್ಲೆಯ ಇತಿಹಾಸ ಮತ್ತು ಪ್ರಸ್ತುತ ಅಭಿವೃದ್ಧಿ ಯೋಜನೆಗಳನ್ನು ಅವಲೋಕಿಸಿದ ಸಚಿವರು, ಜಿಲ್ಲೆಯನ್ನು ಪ್ಲ್ಯಾಸ್ಟಿಕ್ ಮುಕ್ತವಾಗಿಸಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು. ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕೆಲಸಗಳು 2020ರ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
ಜಗದೀಶ್ ಶೆಟ್ಟರ್ ಭಾಷಣದ ಪೂರ್ಣ ಪಾಠ ಹೀಗಿದೆ –
ಬೆಳಗಾವಿ ಜಿಲ್ಲೆ ವಿಸ್ತಾರದಲ್ಲೂ ವಿನ್ಯಾಸದಲ್ಲೂ ಚಾರಿತ್ರಿಕವಾಗಿ ತನ್ನದೇ ಆದ ಮಹತ್ವವನ್ನು ದಾಖಲಿಸಿದೆ. ಸ್ವಾಭಾವಿಕವಾಗಿಯೇ ಜಿಲ್ಲೆಯ ನಾಗರೀಕರು ರಾಷ್ಟ್ರಾಭಿಮಾನಿಗಳು. ಸ್ವಾತಂತ್ರ್ಯದ ಪೂರ್ವದಲ್ಲಿಯೇ ನಮ್ಮ ಜಿಲ್ಲೆಯ ಹೋರಾಟಗಾರರ ಕೊಡುಗೆ ಅನುಪಮವಾದುದು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಿಂದ ಹಿಡಿದು ಗಂಗಾಧರರಾವ್ ದೇಶಪಾಂಡೆಯವರ ತನಕ ಸಾವಿರಾರು ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು.
ಇದು ಗಾಂಧಿಯಂತಹ ಮಹಾತ್ಮರು ನಡೆದಾಡಿದ ನೆಲ. ಅದಕ್ಕೂ ಪೂರ್ವದಲ್ಲಿ ಚನ್ನಮ್ಮ, ರಾಯಣ್ಣರು ಸ್ವಾಭಿಮಾನಕ್ಕಾಗಿ ಆತ್ಮ ಸಮರ್ಪಣೆ ಮಾಡಿಕೊಂಡ ನೆಲ. ಮಧ್ಯಯುಗೀನ ಚರಿತ್ರೆಯಲ್ಲಿ ಶರಣರು ನಡೆದಾಡಿದ ವೀರ ತಪೋಭೂಮಿಯಿದು. ಇಂತಹ ಉತ್ಕøಷ್ಟ ಜನ್ಮಭೂಮಿ ಬೆಳಗಾವಿಯದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ನಮ್ಮ ದೇಶವು ಗಣರಾಜ್ಯವೆಂದು 1950ರ ಜನವರಿ 26ರಂದು ಘೋಷಿಸಿಕೊಂಡಿತು. ಗಣರಾಜ್ಯವು ದೇಶದ ನಾಗರೀಕರಿಗೆ ತನ್ನ ರಾಷ್ರ್ಟದ ಜವಾಬ್ದಾರಿಯನ್ನು ನೀಡಿದ ದಿನವಾಗಿದೆ. ನಮ್ಮ ಸಂವಿಧಾನವನ್ನು ಒಪ್ಪಿಕೊಂಡ ದಿನವದು. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ಮಹತ್ವದ ದಿನವಾಗಿದೆ.
ಭಾರತದ ಸಂವಿಧಾನದ ಆಶಯವು ಅದನ್ನೇ ಹೇಳುತ್ತಿದೆ. ಜಾತ್ಯಾತೀತ ಸಮಾಜವಾದಿ ಗಣರಾಜ್ಯದ ನಿಲುವು ಅದೇ ಆಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರಂಥಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗೆಗೆ ಹಗಲಿರುಳೆನ್ನದೆ ಚಿಂತಿಸಿ, ರಚಿಸಿದ ಭವ್ಯಭಾರತದ ಸತ್ಸಂಕಲ್ಪವಿದಾಗಿದೆ.
ಗಣತಂತ್ರ ಭಾರತವು ಭಾರತದ ಪ್ರತಿ ಪ್ರಜೆಗೂ ಪರಮಾಧಿಕಾರವನ್ನು ಘೋಷಿಸಿದೆ. ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ನೀಡುವುದರ ಮೂಲಕ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದೆ.
ಬೆಳಗಾವಿ ಜಿಲ್ಲೆ ಕರ್ನಾಟಕದ ಜಿಲ್ಲೆಗಳಲ್ಲಿ ಹಿರಿದಾದ ಸ್ಥಾನಪಡೆದಿದೆ. ಜೀವನ ಸ್ನೇಹಿ ವಾತಾವರಣ ಇಲ್ಲಿದೆ. ಇಲ್ಲಿನ ಜನರು ಧರ್ಮ-ಭಾಷೆಯ ಸಹಿಷ್ಣುಗಳು. ಸುಸಂಸ್ಕøತರು. ವಿನಯ ಸಂಪನ್ನರು. ಸುಶಿಕ್ಷಿತರು. ಸಾಮರಸ್ಯದ ಹಾಗೂ ಸಹಕಾರ ತತ್ವದ ಆಧಾರದ ಮೇಲೆ ನಂಬಿಕೆಯಿಟ್ಟವರು. ಗಣರಾಜ್ಯದ ಹಾಗೂ ಸಂವಿಧಾನದ ಮೇಲೆ ಗೌರವ ಇಟ್ಟವರು. ಇಲ್ಲಿ ಎಲ್ಲಾ ಭಾಷೆ, ಧರ್ಮ ಹಾಗೂ ಸಮುದಾಯಗಳವರು ಪರಸ್ಪರ ಅರ್ಥಮಾಡಿಕೊಂಡು ಬದುಕುತ್ತಿರುವರು.
ಅದಕ್ಕಾಗಿ ಅವರನ್ನು ಅಭಿನಂದಿಸುತ್ತಿದ್ದೇನೆ. ಕಳೆದ ಆಗಸ್ಟ್‍ನಲ್ಲಿ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ಕೆಲವು ಮಹತ್ವದ ಯೋಜನೆಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ.
***************
ಆಗಸ್ಟ್ 2019ರಲ್ಲಿ ಉಂಟಾದ ಅತಿವೃಷ್ಟಿ/ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಹಾನಿಯಾದ ಮನೆಗಳಲ್ಲಿ ಒಟ್ಟು 44847 ಮನೆಗಳ ಪೈಕಿ 44019 ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಟ್ಟು ರೂ 311.57 ಕೋಟಿಗಳನ್ನು ಜಮೆ ಮಾಡಲಾಗಿದೆ.
ಅದೇ ರೀತಿ ಅತಿವೃಷ್ಟಿ/ಪ್ರವಾಹದಿಂದ 2.21ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ. ಈ ಕುರಿತು 1,56,785 ರೈತರಿಗೆ ರೂ.238.14ಕೋಟಿ ಮೊತ್ತವು ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ರೈತರ ಬ್ಯಾಂಕ ಖಾತೆಗಳಿಗೆ ಜಮೆಯಾಗಿರುತ್ತದೆ.
ಪ್ರವಾಹದಿಂದಾಗಿ ಹಾನಿಗೊಳಗಾದ ಮೂಲಭೂತ ಸೌಕರ್ಯಗಳಾದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳು, ರಸ್ತೆಗಳು, ಸೇತುವೆಗಳು/ಕಲ್ವಟ್ರ್ಸಗಳ ತುರ್ತು ದುರಸ್ತಿ ಮಾಡಲು ಒಟ್ಟಾರೆಯಾಗಿ ರೂ.9982.41 ಲಕ್ಷಗಳ ಮೊತ್ತದಲ್ಲಿ 4563 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
2019 ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 153 ಮಿಲಿ ಮೀಟರ್ ಸಾಮಾನ್ಯ ಮಳೆ ಪ್ರಮಾಣಕ್ಕೆ ಹೋಲಿಸಲಾಗಿ, ಜಿಲ್ಲೆಯಲ್ಲಿ 275 ಮಿ.ಮೀ. ಮಳೆ ದಾಖಲಾಗಿದ್ದು, ಜಿಲ್ಲೆಯಾದ್ಯಂತ ಸುಮಾರು 80 ಪ್ರತಿಶತ ಹೆಚ್ಚು ಮಳೆ ವರದಿ ಆಗಿದೆ.
ಪ್ರಸ್ತುತ ಸಾಲಿನ ಹಿಂಗಾರಿನಲ್ಲಿ 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 100 ಪ್ರತಿಶತ ಪ್ರದೇಶದಲ್ಲಿ ಹಿಂಗಾರು ಬೆಳೆಗಳ ಬಿತ್ತನೆ ಪ್ರಗತಿಯಾಗಿದೆ. ಮುಂಗಾರು ಹಂಗಾಮಿನಲ್ಲಿ 718351 ಹೆಕ್ಟೇರ್ ಗುರಿ ಪೈಕಿ 680451 ಹೆಕ್ಟೇರ್ ಅಂದರೆ ಶೇ. 95 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಆಗಿರುವ ಧಾರಾಕಾರ ಮಳೆಯಿಂದಾಗಿ ಪ್ರಮುಖ ನದಿಗಳ ನೀರಿನಮಟ್ಟ ಹೆಚ್ಚಾಗಿ, ಆಣೆಕಟ್ಟಿನಿಂದ ಬಿಡುಗಡೆಯಾದ ನೀರಿನಿಂದ ಉಂಟಾಗಿರುವ ಪ್ರವಾಹದಿಂದ ಜಿಲ್ಲೆಯಲ್ಲಿ ಅತಿವೃಷ್ಠಿ/ ನೆರೆ ಪರಿಸ್ಥಿತಿ ಉದ್ಭವವಾಯಿತು.
ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಒಟ್ಟು 1.51 ಲಕ್ಷ ರೈತರಿಗೆ 47,427 ಕ್ವಿಂಟಲ್ ಮತ್ತು ಹಿಂಗಾರು ಹಂಗಾಮಿನಲ್ಲಿ 0.89 ಲಕ್ಷ ರೈತರಿಗೆ 24.944 ಕ್ವಿಂಟಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಹಿಂಗಾರು ಹಂಗಾಮಿನಲ್ಲಿ ವಿತರಣೆಗಾಗಿ ಒಟ್ಟಾರೆ 2,46,909 ಟನ್ ರಸಗೊಬ್ಬರದ ನಿಗದಿಯಾಗಿದ್ದು, ಡಿಸೆಂಬರ್ ಅಂತ್ಯದವರೆಗೆ ನಿಗದಿಯಾದ 37,355 ಟನ್ ಪೈಕಿ 52,780 ಟನ್ ಪೂರೈಕೆಯಾಗಿದ್ದು, ಯಾವುದೇ ರಸಗೊಬ್ಬರದ ಕೊರತೆ ಕಂಡು ಬಂದಿರುವುದಿಲ್ಲ.
ಮಳೆಯಾಶ್ರಿತ ರೈತ ಸಮುದಾಯದ ಜೀವನೋಪಾಯವನ್ನು ಉತ್ತಮಪಡಿಸಿ ಕೃಷಿಕರ ಆದಾಯವನ್ನು ಸುಸ್ಥಿರಗೊಳಿಸುವ ಸದುದ್ದೇಶದಿಂದ 2019-20 ನೇ ಸಾಲಿನಲ್ಲಿ ಈವರೆಗೆ 1255 ಫಲಾನುಭವಿಗಳಿಗೆ ಕೃಷಿಭಾಗ್ಯ ಯೋಜನೆಯಡಿ ರೂ. 1570.34 ಲಕ್ಷ ಸಹಾಯಧನ ಪಾವತಿಸಲಾಗಿದೆ ಹಾಗೂ 2014-15 ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟು 20184 ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ.
ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ತೊಗರಿ, ಭತ್ತ ಹಾಗೂ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿರುತ್ತದೆ. ಪ್ರಸ್ತುತ ಅಥಣಿಯಲ್ಲಿ ತೊಗರಿ ಖರೀದಿಗೆ 3 ಕೇಂದ್ರಗಳು; ನಂದಗಡ, ಕಿತ್ತೂರ ಮತ್ತು ಬೆಳಗಾವಿಯಲ್ಲಿ ಭತ್ತ ಖರೀದಿ ಕೇಂದ್ರಗಳು ಮತ್ತು ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗದಲ್ಲಿ ಜೋಳ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯ ಒಟ್ಟು ತೋಟಗಾರಿಕೆ ಕ್ಷೇತ್ರವು 85177 ಹೆಕ್ಟೇರ್‍ಗಳಷ್ಟಿರುತ್ತದೆ. ಕಳೆದ 5 ವರ್ಷಗಳಲ್ಲಿ ತೋಟಗಾರಿಕೆ ಕ್ಷೇತ್ರವು ಶೇ. 11.55 ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದರಿಂದ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ತೋಟಗಾರಿಕೆ ಜಿಲ್ಲೆಯೆಂದು ಪ್ರಸಿದ್ಧವಾಗಿದೆ.
ಜಿಲ್ಲೆಯ ರೈತರ ಅನುಕೂಲಕ್ಕಾಗಿ ವಿವಿಧ ತಾಲ್ಲೂಕುಗಳಲ್ಲಿ 2019-20ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಗೆ 10.32 ಕೋಟಿ ಅನುದಾನ ನಿಗದಿಯಾಗಿದ್ದು, ಇಲ್ಲಿಯವರೆಗೆ 4.41 ಕೋಟಿ ಅನುದಾನ ಬಿಡುಗಡೆಯಾಗಿ 3.99 ಕೋಟಿ ಅನುದಾನವನ್ನು ವಿನಿಯೋಗಿಸಲಾಗಿರುತ್ತದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 7.22 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 6.81 ಕೋಟಿ ಅನುದಾನವನ್ನು ಸಹಾಯಧನದ ರೂಪದಲ್ಲಿ ನೀಡಲಾಗಿರುತ್ತದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ 4.07 ಕೋಟಿ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 3.48 ಕೋಟಿ ಅನುದಾನವನ್ನು ವಿನಿಯೋಗಿಸಲಾಗಿರುತ್ತದೆ.
***********
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಒಟ್ಟು 11,951 ಫಲಾನುಭವಿಗಳಿಗೆ 28.54 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.
ಜನನಿ ಶಿಶು ಸುರಕ್ಷಾ ಯೋಜನೆಯಡಿಯಲ್ಲಿ ಏಪ್ರಿಲ್ 2018 ರಿಂದ ಮಾರ್ಚ 2019 ರವರೆಗೆ 20,968 ಫಲಾನುಭವಿಗಳಿಗೆ 3.24 ಕೋಟಿ ರೂಪಾಯಿ ಮತ್ತು ಡಿಸೆಂಬರ್ 2019 ರವರೆಗೆ 25,247 ಫಲಾನುಭವಿಗಳಿಗೆ 2.26 ಕೋಟಿ ರೂಪಾಯಿ ಪ್ರೋತ್ಸಾಹ ಧನ ವಿತರಿಸಲಾಗಿದೆ.
ಚಿಕ್ಕೋಡಿಯಲ್ಲಿ 100, ಸವದತ್ತಿಯಲ್ಲಿ 60 ಮತ್ತು ನಿಪ್ಪಾಣಿಯಲ್ಲಿ 30 ಹಾಸಿಗೆಗಳ 3 ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗಳಿಗಾಗಿ ಅಂದಾಜು 39 ಕೋಟಿ ರೂಪಾಯಿ ಮಂಜೂರಾಗಿದ್ದು, ಇಲ್ಲಿಯವರೆಗೆ 13.40 ಕೋಟಿ ವಿನಿಯೋಗಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 1 ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕಾಗಿ ರೂ 140 ಕೋಟಿ ರೂಪಾಯಿ ಮಂಜೂರಾಗಿದ್ದು, ಇಲ್ಲಿಯವರೆಗೆ 39.39 ಕೋಟಿ ವಿನಿಯೋಗಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ 5323 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮಾತೃವಂದನಾ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 66,371 ಫಲಾನುಭವಿಗಳಿಗೆ ರೂ. 27.17ಕೋಟಿ ಮೊತ್ತವನ್ನು ಸಂದಾಯ ಮಾಡಲಾಗಿದೆ.
ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ 1.00 ಲಕ್ಷ ರೂಪಾಯಿಗಳ ಪರಿಪಕ್ವ ಮೊತ್ತ ದೊರೆಯುವಂತೆ ಬೆಳಗಾವಿ ಜಿಲ್ಲೆಗೆ ಇಲ್ಲಿಯವರೆಗೆ 2,39,459 ಫಲಾನುಭವಿಗಳಿಗೆ ಮಂಜೂರಿ ನೀಡಿದ್ದು, ಇಲ್ಲಿಯವರೆಗೆ 2,17,704 ಬಾಂಡ್‍ಗಳನ್ನು ವಿತರಣೆ ಮಾಡಲಾಗಿದೆ.
ಮಾತೃಪೂರ್ಣ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸ್ತುತ 33,825 ಗರ್ಭಿಣಿಯರು ಹಾಗೂ 32,391 ಬಾಣಂತಿಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 100 ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಹಾಗೂ 56 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಮತ್ತು 15 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
2019-20ನೇ ಸಾಲಿನಲ್ಲಿ ಒಟ್ಟು ರೂ.83.85 ಕೋಟಿ ಅನುದಾನದಲ್ಲಿ ರೂ.65.09 ಕೋಟಿ ಖರ್ಚು ಮಾಡಿದ್ದು, ಶೇಕಡಾ 78% ರಷ್ಟು ಪ್ರಗತಿ ಸಾಧಿಸಲಾಗಿದ್ದು ಮತ್ತು 120142 ಫಲಾನುಭವಿಗಳು ಲಾಭ ಪಡೆದಿರುತ್ತಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಟ್ಟು 120142 ಫಲಾನುಭವಿಗಳು ಇದರ ಪ್ರಯೋಜನೆಗಳನ್ನು ಪಡೆದುಕೊಂಡಿರುತ್ತಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ಬೆಳಗಾವಿಯಲ್ಲಿ ಮೆಟ್ರಿಕ್ ನಂತರದ ಬಾಲಕರ ಹಾಗೂ ಬಾಲಕಿಯರ ನೂತನ ವಸತಿನಿಲಯಗಳಿಗೆ ಸರ್ಕಾರವು ಮಂಜೂರಾತಿ ನೀಡಿದೆ.
ಇಲಾಖೆಗೆ 2019-20ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆಗಳಿಗೆ ಡಿಸೆಂಬರ್-2019ರ ಅಂತ್ಯದವೆರೆಗೆ ಒಟ್ಟು 30.91 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 14.81 ಕೋಟಿ ಅನುದಾನ ಖರ್ಚಾಗಿರುತ್ತದೆ.
ಅದೇ ರೀತಿಯಾಗಿ ತಾಲ್ಲೂಕಾ ಪಂಚಾಯತ್ ಲೆಕ್ಕಶೀರ್ಷಿಕೆಗಳಿಗೆ 28.83 ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ 20.75 ಕೋಟಿ ಖರ್ಚು ಭರಿಸಲಾಗಿರುತ್ತದೆ.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 3 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳು; 5 ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು ಹಾಗೂ 14 ಮೌಲಾನಾ ಆಜಾದ್ ಮಾದರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ 4 ವಿದ್ಯಾರ್ಥಿನಿಲಯಗಳ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸ್ತುತ 6 ಮೆಟ್ರಿಕ್ ಪೂರ್ವ ಬಾಲಕರ ಹಾಗೂ 2 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಹಾಗೂ 4 ಮೆಟ್ರಿಕ್ ನಂತರದ ಬಾಲಕರ ಹಾಗೂ 1 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.
2019-20 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ಒಟ್ಟು 10.58 ಕೋಟಿ ಬಿಡುಗಡೆಗೊಂಡಿದ್ದು, 5.13 ಕೋಟಿ ಖರ್ಚಾಗಿರುತ್ತದೆ.
ರಾಜ್ಯದ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕುಗಳು ಹಾಗೂ ಪಿಕಾರ್ಡ ಬ್ಯಾಂಕುಗಳಿಂದ ಅಲ್ಪಾವಧಿ ಸಾಲ ಪಡೆದು ದಿ: 10/07/2018 ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಟ ರೂ. 1.00 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿರುತ್ತದೆ. ಈ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 2 ಲಕ್ಷ 88 ಸಾವಿರ ರೈತರ ಸಾಲ ರೂ. 1293 ಕೋಟಿ ಮನ್ನಾ ಆಗುವ ಬಗ್ಗೆ ಅಂದಾಜಿಸಲಾಗಿದೆ.
ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯ 10,600 ರೈತರಿಗೆ ಒಟ್ಟು ರೂ. 40 ಕೋಟಿ 38 ಲಕ್ಷ ಸಾಲ ಮನ್ನಾ ಮೊತ್ತ ಬಿಡುಗಡೆ ಆಗಿರುತ್ತದೆ. ಬಾಕಿ ಉಳಿದ ರೈತರ ದಾಖಲೆಗಳ ಪರಿಶೀಲನೆ ನಡೆಯುತ್ತಿರುತ್ತದೆ. ರೈತರ ದಾಖಲೆಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯದ ಪ್ರಗತಿ ಅಂತಿಮ ಹಂತದಲ್ಲಿ ಇರುತ್ತದೆ. ಹಂತ ಹಂತವಾಗಿ ಸಾಲ ಮನ್ನಾ ಮೊತ್ತವನ್ನು ಸಂಬಂಧಪಟ್ಟ ರೈತ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗುವುದು.
ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. 2018-19 ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ 1 ಲಕ್ಷ 93 ಸಾವಿರ ರೈತರಿಗೆ ರೂ. 863 ಕೋಟಿ ಬೆಳೆ ಸಾಲ ವಿತರಿಸಲಾಗಿದೆ.
*******
ದಿನಾಂಕ 11.09.2019ರಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಜರುಗಿಸಲಾಗಿರುತ್ತದೆ. ಸದರಿ ಸಮಾವೇಶದಲ್ಲಿ ಸುಮಾರು 400 ಭಾವಿ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದು, ಕೈಗಾರಿಕೋದ್ಯಮಿಗಳು ಕಣಗಲಾ ಮತ್ತು ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾದ ವಸಾಹತು/ಪ್ರದೇಶದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿದ್ದಾರೆ.
2019-24ರ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಿದ್ದು, ಹೂಡಿಕೆದಾರರಿಗೆ ವಿಶೇಷ ಯೋಜನೆ ನೀಡಲು ಸರ್ಕಾರದ ಮುಂದೆ ಪ್ರಸ್ತಾವ ಇದೆ.
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಡಿ 144 ನಿರುದ್ಯೋಗಿ ಯುವಕ ಯುವತಿಯರಿಗೆ ಅತಿ ಸಣ್ಣ ಕೈಗಾರಿಕಾ ಘಟಕ ಸ್ಥಾಪಿಸಲು ಬ್ಯಾಂಕಿನ ಮುಖಾಂತರ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಇದರಲ್ಲಿ ರೂ. 274.67 ಲಕ್ಷ ಸಹಾಯಧನ ನೀಡಲಾಗಿದೆ.
ಕುಡಿಯುವ ನೀರಿನ ಯೋಜನೆಯಡಿ ಸನ್ 2019-20ನೇ ಸಾಲಿಗೆ ಬೆಳಗಾವಿ ಜಿಲ್ಲೆಯಲ್ಲಿ ಭೌತಿಕವಾಗಿ 967 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ 676 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಉಳಿದ 291 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ. ಈ ಕಾಮಗಾರಿಗಳಿಗೆ ರೂ. 130.42 ಕೋಟಿ ಅಂದಾಜು ಮೊತ್ತಕ್ಕೆ 2019-20ನೇ ಸಾಲಿಗೆ ರೂ.82.73 ಕೋಟಿ ಅನುದಾನ ನಿಗದಿಪಡಿಸಲಾಗಿರುತ್ತದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಭೌತಿಕವಾಗಿ ಒಟ್ಟು 09 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 8 ಕಾಮಗಾರಿಗಳು ಮುಕ್ತಾಯವಾಗಿರುತ್ತವೆ. 01 ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಉದ್ದೇಶಿಸಿದ್ದು ಈಗಾಗಲೇ 40 ಗ್ರಾಮ ಪಂಚಾಯತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ಘಟಕ ಮಂಜೂರಾತಿಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಮುಂದುವರೆದು ಜಿಲ್ಲೆಯ 506 ಗ್ರಾಮ ಪಂಚಾಯತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ಘಟಕವನ್ನು ಕ್ಲಸ್ಟರ್ ಮಾದರಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
************
ಕರ್ನಾಟಕ ನೀರಾವರಿ ನಿಗಮ ನಿಯಮಿತ, (ಉತ್ತರ), ಬೆಳಗಾವಿ ಈ ವಲಯದಡಿ ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 32 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಪೈಕಿ ಒಟ್ಟು 23 ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. (6ನೀರಾವರಿ ಯೋಜನೆಗಳು, 7 ಏತ ನೀರಾವರಿ ಯೋಜನೆಗಳು, 5 ಕೆರೆ ತುಂಬಿಸುವ ಯೋಜನೆ, 1 ಸೇತುವೆ ನಿರ್ಮಾಣ, 2 ಬ್ಯಾರೇಜ್ ಕಾಮಗಾರಿಗಳು ಹಾಗೂ 2 ಆಧುನಿಕರಣ ಯೋಜನೆಯು ಪ್ರಗತಿಯಲ್ಲಿರುತ್ತದೆ)
ಈ ವಲಯದಡಿ ಒಟ್ಟು 9 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. (3 ಏತ ನೀರಾವರಿ ಯೋಜನೆಗಳು ಹಾಗು 6 ಕೆರೆ ತುಂಬಿಸುವ ಯೋಜನೆಗಳು ಪೂರ್ಣಗೊಂಡಿರುತ್ತದೆ). 6 ಕೆರೆ ತುಂಬಿಸುವ ಯೋಜನೆಗಳಿಂದ ಒಟ್ಟು29 ಕೆರೆಗಳಲ್ಲಿ ನೀರು ತುಂಬಿಸಲಾಗಿದೆ.
ಈ ವಲಯದಡಿ ಬರುವ ಪ್ರಗತಿಯಲ್ಲಿರುವ/ ಪೂರ್ಣಗೊಂಡ ಯೋಜನೆಯಿಂದ ಒಟ್ಟು 5.58 ಲಕ್ಷ ಹೇಕ್ಟೇರ್ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿತ್ತು, ಈ ಪೈಕಿ ಇಲ್ಲಿಯವರೆಗೆ 4.23 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ತೂಬುಗಾಲುವೆ ಪ್ರಗತಿ ಸಾಧಿಸಲಾಗಿದೆ ಹಾಗೂ 3.77 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ ಪ್ರಗತಿ ಸಾಧಿಸಲಾಗಿದೆ.
2019-20 ನೇ ಸಾಲಿನಲ್ಲಿ 3 ಯೊಜನೆಗಳು ಆಯವ್ಯಯ ಭಾಷಣದಲ್ಲಿ ಘೋಷಿಸಲಾಗಿರುತ್ತದೆ. ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದ 23 ಕೆರೆಗಳನ್ನು ಕೃಷ್ಣಾ ನದಿಯಿಂದ ತುಂಬಿಸಲು ಯೋಜಿಸಲಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ರಸ್ತೆಯಲ್ಲಿ ಕೃಷ್ಣಾ ನದಿಗೆ ಬ್ರಿಡ್ಜ ಕಂ ಬ್ಯಾರೇಜ ನಿರ್ಮಿಸಲು ಯೋಜಿಸಲಾಗಿದೆ ಹಾಗೂ ಬೆಳಗಾವಿ ಜಿಲ್ಲೆ ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಕೊಳ್ಳಲು ಯೋಜಿಸಲಾಗಿದೆ. ಸದರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲು ಕ್ರಮ ಕೈಕೊಳ್ಳಲಾಗುತ್ತಿದೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಕರ್ನಾಟಕ ಸರ್ಕಾರದಿಂದ 2008 ರಿಂದ ನಾಲ್ಕು ಹಂತದಲ್ಲಿ ರೂ 400 ಕೋಟಿ ಮಾನ್ಯ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಅನುದಾನಗಳ ಮಂಜೂರಾಗಿದ್ದು, ಅದರಲ್ಲಿ ಈಗಾಗಲೇ ರೂ.288.46 ಕೋಟಿ ವೆಚ್ಚವಾಗಿರುತ್ತದೆ.
ಇವುಗಳಲ್ಲಿ ನಗರ ಮೂಲಭೂತ ಸೌಕರ್ಯ ಸುಧಾರಿಸಲು ಬೇಕಾಗುವ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಆರ್ಟ ಗ್ಯಾಲರಿ, ವಾಣಿಜ್ಯ ಸಂಕಿರ್ಣ, 3 ಈಜುಗೋಳ, ಹಾಕಿ ಸ್ಟೆಡಿಯಂ , ಕ್ರಿಕೇಟ್ ಸ್ಟೆಡಿಯಂ, ಉದ್ಯಾನವನಗಳು, ಆಟದ ಮೈದಾನ ಅಭಿವೃದ್ದಿ, ಲೇಸರ್ ಪಾರ್ಕ ಹಾಗೂ ಪ್ರಮುಖ ರಸ್ತೆ ಉದ್ಯಾನಗಳಲ್ಲಿ ಅಲಂಕಾರಿಕ ವಿದ್ಯುತ್ ಬೀದಿ ದೀಪಗಳನ್ನು ಅಳವಡಿಸುವದು ಇತ್ಯಾದಿ ನಗರದ ಸರ್ವತೋಮುಖ ಅಭಿವೃದ್ದಿಗೆ ಬೇಕಾದ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲ ಕಾಮಗಾರಿಗಳು ಮುಕ್ತಾಯಗೊಂಡಿರುತ್ತವೆ.
ಕರ್ನಾಟಕ ಸರ್ಕಾರವು ಬೆಳಗಾವಿ ಮಹಾನಗರ ಪಾಲಿಕೆಗೆ 2019-20 ನೇ ಸಾಲಿಗೆ ಎಸ್ ಎಫ್ ಸಿ ಅನುದಾನದಡಿ ರೂ. 1259.00 ಲಕ್ಷ ಮಂಜೂರು ಮಾಡಿದ್ದು, 14 ನೇ ಹಣಕಾಸಿನ ಆಯೋಗದ ಅನುದಾನದಡಿ ರೂ.2182.00 ಲಕ್ಷ ಮಂಜೂರಾಗಿದೆ, ಸದರಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಕರ್ನಾಟಕ ಸರ್ಕಾರವು ಬೆಳಗಾವಿ ಮಹಾನಗರ ಪಾಲಿಕೆಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೊಜನೆಯಡಿ ರೂ.125 ಕೋಟಿಗಳ ಅನುದಾನದಡಿಯಲ್ಲಿ ಕ್ರಿಯಾ ಯೋಜನೆ ಅನುಮೋದನೆಗೆ ಸಲ್ಲಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಉದ್ದೇಶಿಸಿದ್ದು, ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯ ಆಯ್ದ 10 ವಾರ್ಡ್‍ಗಳಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗಿದೆ.
ಉಳಿದ 48 ವಾರ್ಡ್‍ಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಕುರಿತು ಯೋಜನೆಯನ್ನು ರೂಪಿಸಲಾಗಿದ್ದು, ಯೋಜನೆಯನ್ನು ವಿಶ್ವ ಬ್ಯಾಂಕಿನ ಧನ ಸಹಾಯದ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಯೋಜಿಸಲಾಗಿರುತ್ತದೆ. ಸದರಿ ಯೋಜನೆಯನ್ನು 2 ಹಂತದಲ್ಲಿ ಅನುಷ್ಠಾನಗೊಳಿಸಲು ತಿರ್ಮಾನಿಸಿದ್ದು, ಮೊದಲನೆ ಹಂತದ ರೂ. 427.00 ಕೋಟಿಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಗುತ್ತಿಗೆದಾರರ ನೇಮಕಾತಿಗಾಗಿ ಟೆಂಡರ್ ಪ್ರಕ್ರೀಯೆಯನ್ನು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಇವರಿಂದ ಕೈಗೊಂಡಿದ್ದು, ದಿನಾಂಕ: 05.10.2019 ರಂದು ತಾಂತ್ರಿಕÀ ಬಿಡ್‍ನ್ನು ತೆರೆದು, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಇವರಿಂದ ವಿಶ್ವ ಬ್ಯಾಂಕ್‍ಗೆ ಅನುಮೋದನೆಗಾಗಿ ಸಲ್ಲಿಸಲಾಗಿರುತ್ತದೆ. ವಿಶ್ವ ಬ್ಯಾಂಕ್ ಅನುಮೋದನೆ ನೀಡಿದ ನಂತರ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುವದು.
ನಗರೋತ್ಥಾನ (ಮುನಿಸಿಪಾಲಿಟಿ) 3ನೇ ಹಂತದ ಯೋಜನೆಯಡಿ ಬೆಳಗಾವಿ ಜಿಲ್ಲೆಯ 32 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ರೂ. 241.50 ಕೋಟಿ ಅನುದಾನ ಹಂಚಿಕೆಯಾಗಿರುತ್ತದೆ. ಅದರಲ್ಲಿ ರೂ. 131.12 ಕೋಟಿ ಬಿಡುಗಡೆ ಮಾಡಲಾಗಿದ್ದು, ರೂ. 131.09 ಕೋಟಿ ವೆಚ್ಚವಾಗಿರುತ್ತದೆ.
ರಾಜ್ಯ ಹಣಕಾಸು ಆಯೋಗ (ಎಸ್.ಎಫ್.ಸಿ) ಮುಕ್ತನಿಧಿ ಅನುದಾನ 2019-20ನೇ ಸಾಲಿಗೆ ರೂ. 53.61 ಕೋಟಿ ಹಂಚಿಕೆಯಾಗಿರುತ್ತದೆ. ಅದರಲ್ಲಿ ರೂ. 35.55 ಕೋಟಿ ಬಿಡುಗಡೆ ಮಾಡಲಾಗಿದ್ದು, ರೂ. 14.76 ಕೋಟಿ ವೆಚ್ಚವಾಗಿರುತ್ತದೆ.
14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನ 2019-20ನೇ ಸಾಲಿಗೆ ರೂ. 92.83 ಕೋಟಿ ಹಂಚಿಕೆಯಾಗಿರುತ್ತದೆ. ಅದರಲ್ಲಿ ರೂ. 46.42 ಕೋಟಿ ಬಿಡುಗಡೆ ಮಾಡಲಾಗಿದ್ದು, ರೂ. 6.77 ಕೋಟಿ ವೆಚ್ಚವಾಗಿರುತ್ತದೆ.
ಸ್ಮಾರ್ಟಸಿಟಿ ಯೋಜನೆಯಡಿ ಈಗಾಗಲೇ ರಸ್ತೆ ಬದಿ ಕುಡಿಯುವ ನೀರಿನ ಕಿಯಾಸ್ಕ್ ಗಳ ಅಳವಡಿಕೆ, ಮಳೆ ನೀರುಕೊಯ್ಲು, ನಾಥ ಪೈ ಉದ್ಯಾನವನ ಸುಧಾರಣೆ, ಸ್ಮಾರ್ಟ ಬಸ್ ಶೆಲ್ಟರ್ ನಿರ್ಮಾಣ, ಡಿಜಿಟಲ್ ಬಿಲ್ ಬೋರ್ಡ ಅಳವಡಿಕೆ, ಸ್ಮಾರ್ಟಕ್ಲಾಸ್ ರೂಂ ಗಳ ನಿರ್ಮಾಣ, ಬಿಡಾಡಿ ದನಗಳ ಪುನರ್ವಸತಿ ಕೇಂದ್ರ ಸೇರಿದಂತೆ ಒಟ್ಟು 14 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ಪ್ರಸ್ತುತ ಸ್ಮಾರ್ಟ ಸಿಟಿ ಯೋಜನೆಯಡಿ ಒಟ್ಟಾರೆ 820.74 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ನಗರದಲ್ಲಿ ಸುಮಾರು ರೂ.373.83 ಕೋಟಿಗಳ ಅನುದಾನದಡಿ ಕಾಂಕ್ರೀಟ್‍ರಸ್ತೆ, ಸ್ಮಾರ್ಟರಸ್ತೆ, ಪೇವರ್ ಅಳವಡಿಕೆ, ಮುಂತಾದ ಒಟ್ಟು ಅಂದಾಜು 72 ಕೀ.ಮಿ ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ರೂ. 46.69 ಕೋಟಿ ಮೊತ್ತದಲ್ಲಿ – ನಗರದ ಟಿಳಕವಾಡಿಯಲ್ಲಿ ಬಹು ಉದ್ದೇಶಿತ ವಾಣಿಜ್ಯ ಸಂಕೀರ್ಣ ಮಳಿಗೆ ಕಾಮಗಾರಿ ಪ್ರಗತಿಯಲ್ಲಿದೆ. ನಗರದಲ್ಲಿ ಒಟ್ಟು 11 ಹಂತಗಳಲ್ಲಿ ಒಟ್ಟು ರೂ.79.80 ಕೋಟಿ ಅನುದಾನದಡಿ ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಹಾಗೂ ಬೀದಿ ದೀಪ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 35.97 ಕೋಟಿ ವೆಚ್ಚದಲ್ಲಿ ವ್ಯಾಕ್ಸಿನ್‍ಡಿಪೋದಲ್ಲಿ (ಪಾರಂಪರಿಕ) ಹೆರಿಟೇಜ್ ಉದ್ಯಾನವನ ಸೇರಿದಂತೆ ವಿವಿಧ ಉದ್ಯಾನವನಗಳ ಅಭಿವೃದ್ಧಿ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದೆ.
ರೂ. 13.81 ಕೋಟಿ ವೆಚ್ಚದಲ್ಲಿ ಕಣಬರ್ಗಿ ಕೆರೆ ಮತ್ತು ಕೋಟೆ ಕೆರೆ ಅಭಿವೃದ್ಧಿ ಕಾಮಗಾರಿ; ಸುಮಾರು 32.23 ಕೋಟಿ ವೆಚ್ಚದಲ್ಲಿ ಸಿಟಿಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 48.98 ಕೋಟಿ ವೆಚ್ಚದಲ್ಲಿ ಆಜ್ಞೆ ಮತ್ತು ನಿಯಂತ್ರಣಾ ಕೇಂದ್ರ Iಅಅಅ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಹೀಗೆ ಸ್ಮಾರ್ಟ ಬಸ್ ನಿಲ್ದಾಣ, ಪ್ರೈವೇಟ್ ಬಸ್ ಪಾರ್ಕಿಂಗ್ ಸೇರಿದಂತೆ ಒಟ್ಟಾರೆ ರೂ. 820.74 ಕೋಟಿ ವೆಚ್ಚದಲ್ಲಿ 64 ಕಾಮಗಾರಿಗಳು ಪ್ರಗತಿಯಲ್ಲಿವೆ.
ದಿನಾಂಕ 29-1-2020 ರಂದು ಮಾನ್ಯ ಮುಖ್ಯಮಂತ್ರಿಗಳು ಕಮಾಂಡ ಕಂಟ್ರೋಲ್ ಸೆಂಟರ್‍ನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಾಕಿ ಉಳಿದ ಎಲ್ಲಾ ಕಾಮಗಾರಿಗಳನ್ನು 2020 ರ ಅಂತ್ಯದವರೆಗೆ ಪೂರ್ಣಗೊಳಿಸಲು ಕ್ರಮ ಕೈಕೊಳ್ಳಲಾಗುವುದು.
**********
ಆತ್ಮೀಯರೇ,
ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿರುವ ನಮ್ಮ ಸಕಾರವು ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಕೃಷಿಕರು, ಕಾರ್ಮಿಕರು, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಹೀಗೆ ಎಲ್ಲ ವರ್ಗದ ಹಿತರಕ್ಷಣೆಗೆ ಬದ್ಧವಾಗಿದೆ. ಗಣತಂತ್ರ ವ್ಯವಸ್ಥೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನಿಟ್ಟುಕೊಂಡು ಎಲ್ಲರೂ ಸಹಬಾಳ್ವೆಯಿಂದ ಬದುಕೋಣ. ಮತ್ತೊಮ್ಮೆ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ