Latest

ಜಿಲ್ಲೆ ಗಳಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ. ವತಿಯಿಂದ ಪ್ರಾರಂಭಿಸಲಾದ ಆಕ್ಸಿಜನ್ ಬಸ್ ಸೇವೆಯು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಸೇವಾ ಸೌಲಭ್ಯವನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುತ್ತಿದೆ. ಇದರ ಅಂಗವಾಗಿ ಚಿಕ್ಕಮಗಳೂರಿನಲ್ಲಿಯೂ ಕೆ. ಎಸ್. ಆರ್. ಟಿ.ಸಿ.ಯು ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಳೆಯಿಂದ ( ಸೋಮವಾರ) ಬಸ್ಸಿನಲ್ಲಿಯೇ ಆಕ್ಸಿಜನ್ ಘಟಕವನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಸ್ಥಳಾಭಾವದಿಂದ ರೋಗಿಗಳಿಗೆ ಅಲ್ಲಿ ಕುಳಿತು ಕಾಯುವುದಕ್ಕೂ ಕಷ್ಟವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಉಚಿತವಾಗಿ ಬಸ್ಸಿನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸಲು ಈ ನೂತನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಆಕ್ಸಿಜನ್ ಪೂರೈಸಲು ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಕೆ.ಎಸ್. ಆರ್. ಟಿ. ಸಿ. ಬಸ್ಸನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಲಾಗುವುದು. ಹೊರಗಿನಿಂದ ಕೋವಿಡ್ ಪೀಡಿತರು ಬಂದಾಗ ತಕ್ಷಣಕ್ಕೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಗದಿದ್ದರೆ ಆತಂಕ ಪಡದೇ ಈ ಆಕ್ಸಿಜನ್ ಮೊಬೈಲ್ ಬಸ್ಸಿನಲ್ಲಿಯೇ ತುರ್ತಾಗಿ ವಿಶ್ರಮಿಸಿ ಅಗತ್ಯ ಆಕ್ಸಿಜನ್ ಪಡೆದುಕೊಳ್ಳಲು ಸಾಧ್ಯವಾಗುವಂತೆ ವೈದ್ಯಕೀಯ ಉಪಕರಣಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಕೆ. ಎಸ್. ಆರ್. ಟಿ. ಸಿ. ಯ ಈ ನೂತನ ಸೇವೆಯನ್ನು ಖಾಸಗಿ ಸಂಸ್ಥೆಗಳಾದ ನಾಯೋನಿಕ ಐ ಕೇರ್ ಟ್ರಸ್ಟ್, ಸಿಟ್ರಿಕ್ ಇಂಡಿಯಾ ಮತ್ತು ಜಿಲ್ಲಾ ಆಡಳಿತಗಳ ಸಹಯೋಗದಿಂದ ಪ್ರಾರಂಭಿಸಿದೆ. ಏಕಕಾಲಕ್ಕೆ ಒಟ್ಟು 8 ಮಂದಿ ರೋಗಿಗಳಿಗೆ ಈ ಬಸ್ಸಿನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸವದಿ ವಿವರಿಸಿದರು.

ಚಾಲಕರು ಮತ್ತು ಸಿಬ್ಬಂದಿಗಳಿಗೆ ಸೋಂಕು ಹರಡದಂತೆ ವಿಶೇಷ ವಿನ್ಯಾಸದೊಂದಿಗೆ ಈ ‘ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್ಸನ್ನು ಸಜ್ಜುಗೊಳಿಸಲಾಗಿದೆಯಲ್ಲದೇ, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಇದರಲ್ಲಿ ಒದಗಿಸಲಾಗುವುದು. ಪ್ರತಿ ರೋಗಿಗಳೂ ಸಾಮಾನ್ಯವಾಗಿ 2ರಿಂದ 4 ಗಂಟೆಯ ಅವಧಿಯಲ್ಲಿ ಈ ಸೌಲಭ್ಯ ದಿಂದ ತಮಗೆ ಬೇಕಾದ ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆದುಕೊಳ್ಳಬಹುದಾಗಿದೆ. ಈ ರೀತಿಯ ವಿಶೇಷ ‘ಆಕ್ಸಿಜನ್ ಬಸ್ ಸೇವೆಯನ್ನು ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸಲು ಸಾರಿಗೆ ನಿಗಮಗಳು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಗೆ ಮತ್ತಿಬ್ಬರು ಬಲಿ; ಕೋಲಾರದಲ್ಲಿ 12 ಪ್ರಕರಣ ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button