ಪರಿಹಾರ ಮೊತ್ತ ವಿತರಣೆ ಜವಾಬ್ದಾರಿಯನ್ನು ಪಂಚಾಯ್ತಿಗೆ ನೀಡಲಿ ; ಡಿ.ಕೆ. ಶಿವಕುಮಾರ್

Preview YouTube video *ನೆಪಮಾತ್ರದ ಪ್ಯಾಕೇಜ್, ಬಡವರಿಗೆ ನೆರವಾಗುವ ಉದ್ದೇಶವಿಲ್ಲ; ಡಿ.ಕೆ. ಶಿವಕುಮಾರ್ ಆಕ್ರೋಶ*

ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
‘ಸರ್ಕಾರದ ಕೊರೋನಾ ಪರಿಸ್ಥಿತಿ ನಿರ್ವಹಣೆ ಬಗ್ಗೆ ನಂಬಿಕೆ ಇಲ್ಲ. ಕಳೆದ ಬಾರಿಯೂ ಇದೇ ರೀತಿ ಪರಿಹಾರ ಘೋಷಿಸಿದ್ದರು. ಚಾಲಕರು, ನೇಕಾರರು, ಸವಿತಾ ಸಮಾಜದವರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿಲ್ಲ.
ಬಡವರಿಗೆ ನೆರವಾಗುವ ಇಚ್ಛೆ ಸರಕಾರಕ್ಕೆ ಇರುವುದಾದರೆ ಕನಿಷ್ಠ ತಲಾ 10 ಸಾವಿರ ರುಪಾಯಿ ನೀಡಬೇಕು. ಪರಿಹಾರ ಮೊತ್ತ ವಿತರಣೆ ಜವಾಬ್ದಾರಿಯನ್ನು ಪಂಚಾಯ್ತಿಗೆ ನೀಡಲಿ. ಪಂಚಾಯ್ತಿ ಅವರು, ಪಾಲಿಕೆಯವರು ತಮ್ಮ ವ್ಯಾಪ್ತಿಯಲ್ಲಿರುವ ಸಾಂಪ್ರದಾಯಿಕ ವೃತ್ತಿ ಅವಲಂಬಿತರನ್ನು ಗುರುತಿಸಿ ಚೆಕ್ ಮೂಲಕ ಹಣ ನೀಡಿ ದಾಖಲೆಗೆ ಒಂದು ಫೋಟೋ ತೆಗೆದುಕೊಳ್ಳಲಿ. ನಮ್ಮ ಜನ ಯಾರೂ ಮೋಸ ಮಾಡುವುದಿಲ್ಲ. ಅದು ಬಿಟ್ಟು ಆಪ್ ಅಲ್ಲಿ ನೋಂದಣಿ ಮಾಡಿಸಿ, ಬ್ಯಾಂಕ್ ಮೂಲಕ ಪಾವತಿಸುತ್ತೇವೆ ಅಂದರೆ ಅದಾಗದ ಕೆಲಸ. ಶಿಕ್ಷಕರು, ಪಂಚಾಯ್ತಿ ಅವರನ್ನು ಬಳಸಿಕೊಂಡು ಹಣ ಹಂಚಲಿ. ಇಲ್ಲದಿದ್ದರೆ ಇದು ಕೇವಲ ಕಾಗದದ ಮೇಲಿನ  ಘೋಷಣೆಯಾಗಿ ಉಳಿಯಲಿದೆ.
ಈ ಪ್ಯಾಕೇಜ್ ಅಲ್ಲಿ ಘೋಷಿಸಿರುವ 2- 3 ಸಾವಿರ ಯಾವುದಕ್ಕೂ ಸಾಲುವುದಿಲ್ಲ. ನಾವು ಒತ್ತಡ ಹಾಕಿದ್ದೇವೆ ಎಂದು ಕಾಟಾಚಾರಕ್ಕೆ ಈ ಪ್ಯಾಕೇಜ್ ಘೋಷಿಸಲಾಗಿದೆ. ಇದು ಜನರ ಹಿತಕ್ಕಾಗಿ ಘೋಷಿಸಿದ ಪ್ಯಾಕೇಜ್ ಅಲ್ಲ. ರೈತರಿಗೆ ಬೆಂಬಲ ಬೆಲೆ ಏನಾದರೂ ಘೋಷಣೆ ಮಾಡಿದ್ದಾರಾ? ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆ. ಬ್ಯಾಂಕ್ ಜತೆ ನೇರವಾಗಿ ಮಾತನಾಡಿದ್ದಾರಾ? ಬಡ್ಡಿ ಮನ್ನಾ ಮಾಡಿಸಿದ್ದಾರಾ? ಕಳೆದ ವರ್ಷ ಹೂ ಬೆಳೆಗಾರರಿಗೆ ಘೋಷಿಸಿದ 25 ಸಾವಿರ ರುಪಾಯಿ ಯಾರಿಗೆ ತಲುಪಿದೆ ಲೆಕ್ಕ ಕೊಡಲಿ. ಈಗ ಅದನ್ನು 10 ಸಾವಿರಕ್ಕೆ ಕುಗ್ಗಿಸಿದ್ದಾರೆ.
ಯಾರಯ, ಯಾರು ಕೆಲಸ ಕಳೆದುಕೊಂಡಿದ್ದಾರೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಲಿ. ಕಟ್ಟಡ ಕಾರ್ಮಿಕರಿಗೂ ಇವರು ಕೊಟ್ಟಿರುವುದು ಏನೇನೂ ಸಾಲದು. ಇದು ಬಡವರ ಬಗ್ಗೆ ಚಿಂತಿಸುವ ಸರ್ಕಾರ ಅಲ್ಲ. ನಾವು ಆಗ್ರಹಿಸಿದ್ದಕ್ಕೆ ಒಂದು ಪ್ಯಾಕೇಜ್ ಅಂತ ಘೋಷಿಸಿದ್ದಾರೆ. ಕಳೆದ ವರ್ಷದ ಪ್ಯಾಕೇಜ್ ವಿಫಲವಾಗಿದೆ. ಕಳೆದ ವರ್ಷ 7.5 ಲಕ್ಷ ಚಾಲಕರಲ್ಲಿ ಬರೀ ಒಂದು ಲಕ್ಷದಷ್ಟು ಮಂದಿಗೆ ಮಾತ್ರ ಕೊಟ್ಟಿದ್ದಾರೆ.
ಈ ಸರ್ಕಾರ ವಾಸ್ತವಕ್ಕೆ ಇಳಿದು ಕೆಲಸ ಮಾಡಲಿ.ಇಂದಿರಾ ಕ್ಯಾಂಟೀನ್ ನಲ್ಲಿ ಗುರುತಿನ ಚೀಟಿ ಕೊಟ್ಟು ಆಹಾರ ಪಡೆಯಲು ಹೇಳುತ್ತಾರೆ. ಇದು ಸಾಧ್ಯವಾ? ನಾವು ವಿರೋಧಿಸಿದ ನಂತರ ಅದನ್ನು ರದ್ದು ಮಾಡಿದರು. ಈಗ ಮತ್ತೆ ಗುರುತಿನ ಚೀಟಿ ಕೇಳುತ್ತಿದ್ದಾರೆ. ಸರ್ಕಾರದ ನಿರ್ವಹಣೆಯಲ್ಲಿ ನಮಗೆ ಸಮಾಧಾನವೂ ಇಲ್ಲ, ನಂಬಿಕೆಯೂ ಇಲ್ಲ. ಪರಿಹಾರ ನೀಡುವುದಾದರೆ, ಬಹಳ ವ್ಯವಸ್ಥಿತವಾಗಿ ಕೊಡಲಿ.
ಅಸಂಘಟಿತ ಕಾರ್ಮಿಕರು, ಹಳ್ಳಿಯಲ್ಲಿ ಕೆಲಸ ಮಾಡುವವರಿಗೆ ಏನೂ ಕೊಟ್ಟಿಲ್ಲ. ಗ್ರಾಮೀಣ ಭಾಗದಲ್ಲಿ ವಾರಿಯರ್ ಆಗಿ ಕೆಲಸ ಮಾಡುತ್ತಿರುವವರು, ವಾಟರ್ ಮನ್, ಲೈನ್ ಮನ್, ಮುನ್ಸಿಪಾಲಿಟಿ ಕಾರ್ಮಿಕರನ್ನು ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ವಿಮೆ ನೀಡಬೇಕು. ಅವರ ರಕ್ಷಣೆ ನೀಡಬೇಕು. ಒಂದೊಮ್ಮೆ ಅವರು ಮೃತಪಟ್ಟರೆ ಕುಟುಂಬದವರಿಗೆ ಪರಿಹಾರ ನೀಡಬೇಕು.
ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಪರೀಕ್ಷೆ ನಡೆಸಬೇಕು. ಕರ್ನಾಟಕ ರಾಜ್ಯ ಮತ್ತು ಬೆಂಗಳೂರಿನಂತಹ ರಾಜಧಾನಿಯಲ್ಲಿ ಅತಿ ಹೆಚ್ಚು ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳನ್ನು ಇಟ್ಟುಕೊಂಡು ಪರೀಕ್ಷೆ ನಡೆಸಲು ಆಗುವುದಿಲ್ಲ ಎಂದರೆ ಹೇಗೆ? ಇವರಿಂದ ಸಾಧ್ಯವಿಲ್ಲ ಎನ್ನುವ ಕಾರಣಕ್ಕೇ ಪ್ರಧಾನ ಮಂತ್ರಿಗಳು ಜಿಲ್ಲಾಧಿಕಾರಿಗಳ ಜತೆ ನೇರವಾಗಿ ಸಭೆ ನಡೆಸಿ, ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಇದೇ ಸಾಕ್ಷಿ. ರಾಜ್ಯ ನಾಯಕತ್ವದ ಬಗ್ಗೆ ಪ್ರಧಾನಿಗಳೂ ನಂಬಿಕೆ ಕಳೆದುಕೊಂಡಿದ್ದಾರೆ.’

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button