Kannada NewsKarnataka NewsNationalPolitics

*ಎಲ್‌ಪಿಜಿ, ಇಂಧನ ದರ ಏರಿಕೆ ಮಾಡುವುದು ಅನಿವಾರ್ಯ: ಕೇಂದ್ರ ಸಚಿವ ಪ್ರಲ್ಲಾದ ಜೋಶಿ*

ಪ್ರಗತಿವಾಹಿನಿ ಸುದ್ದಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿರುವ ಗಂಭೀರ ಯುದ್ಧದ ಬಿಕ್ಕಟ್ಟಿನಿಂದಾಗಿ ದೇಶೀಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ತಿಳಿಸಿದ್ದಾರೆ. 

ಈ ಕುರಿತು ಧಾರವಾಡದಲ್ಲಿ ಮಾತನಾಡಿರುವ ಅವರು, ಸಿಲಿಂಡ‌ರ್ ಬೆಲೆ ಹೆಚ್ಚಳವಾಗಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಷ್ಟದ ಬಗ್ಗೆ ಕೇಂದ್ರ ಸರ್ಕಾರಕ್ಕೂ ತೀವ್ರ ಬೇಸರವಿದೆ ಮತ್ತು ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿರುವುದಕ್ಕೆ ನಮಗೂ ತುಂಬಾ ಬೇಸರವಿದೆ. ಆದರೆ ಕೇಂದ್ರ ಸರ್ಕಾರವನ್ನು ಟೀಕಿಸುವ ಮುನ್ನ ಪ್ರತಿಯೊಬ್ಬರೂ ಇಡೀ ವಿಶ್ವ ಎದುರಿಸುತ್ತಿರುವ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಸದ್ಯ ಜಾಗತಿಕವಾಗಿ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದ್ದು ಎಲ್‌ಪಿಜಿ ಪೂರೈಕೆಯ ಮೂಲಗಳು ತೀರಾ ಸೀಮಿತವಾಗಿವೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಗ್ರಾಹಕರಿಗೆ ಹೆಚ್ಚಿನ ತೊಂದರೆಯಾಗದಂತೆ ತಡೆಯಲು ಇಂಧನ ಮತ್ತು ಎಲ್‌ಪಿಜಿ ಆಮದು ಮಾಡಿಕೊಳ್ಳುವ ಸಂಪನ್ಮೂಲಗಳನ್ನು ವಿಸ್ತರಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ಸದ್ಯ ಭಾರತಕ್ಕೆ ಸಾಕಷ್ಟು ದೂರದಲ್ಲಿರುವ ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಡಗುಗಳ ಸಂಚಾರದ ಅವಧಿ 40 ರಿಂದ 45 ದಿನಗಳವರೆಗೆ ಹೆಚ್ಚಿರುವುದರಿಂದ ಸಾರಿಗೆ ವೆಚ್ಚ ಮೂಲ ಬೆಲೆ ಹಾಗೂ ಇನ್ನೂರೆನ್ಸ್ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ. ನಮಗೂ ಸಾಮಾನ್ಯ ಜನರ ಬಗ್ಗೆ ಅಷ್ಟೇ ಕಾಳಜಿಯಿದೆ, ಆದರೆ ಇಂತಹ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದಕ್ಕೂ ಮುನ್ನ ಮಾರ್ಚ್ 7 ರಂದು ಪ್ರತಿ ಸಿಲಿಂಡ‌ರ್ ಬೆಲೆಯನ್ನು 60 ರೂಪಾಯಿ ಹೆಚ್ಚಿಸಲಾಗಿತ್ತು. ಪ್ರಸ್ತುತ ದರ ಪರಿಷ್ಕರಣೆಗೂ ಮುನ್ನ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿ ಎಲ್‌ಪಿಜಿ ಸಿಲಿಂಡರ್ ಮಾರಾಟದ ಮೇಲೆ ಸುಮಾರು 703 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದವು ಎಂದು ಅಂದಾಜಿಸಲಾಗಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೂ ಭಾರತ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಯುದ್ಧದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿರುವುದರಿಂದ, ಭಾರತದಲ್ಲಿ ಒಂದು ದೇಶೀಯ ಎಲ್‌ಪಿಜಿ ಸಿಲಿಂಡರ್ ಪೂರೈಸುವ ವೆಚ್ಚ ಈಗ 1,600 ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ಭಾರತದ ಎಲ್‌ಪಿಜಿ ಆಮದು ವೆಚ್ಚವು ಜಾಗತಿಕ ಮಾನದಂಡವಾದ ಸೌದಿ ಕಾಂಟ್ರಾಕ್ಟ್ ಪ್ರೈಸ್ (CP) ಗೆ ಲಿಂಕ್ ಆಗಿರುತ್ತದೆ. ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಉಂಟಾಗಿರುವ ಸಂಘರ್ಷದಿಂದಾಗಿ ಗಲ್ಫ್ ರಾಷ್ಟ್ರಗಳಿಂದ ಇಂಧನ ಪೂರೈಕೆ ಕ್ಷೀಣಿಸಿದ್ದು, ಇದರಿಂದಾಗಿ ಸೌದಿ ಕಾಂಟ್ರಾಕ್ಟ್ ಪ್ರೈಸ್ ದರವು ಸುಮಾರು ಶೇಕಡಾ 46 ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ ಎಂದರು.

ಇದೇ ವೇಳೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರವು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಬಣ ರಾಜಕೀಯದಿಂದ ನಲುಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾ‌ರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ ಹಾಗೂ ಇನ್ನು ಕೆಲವರು ಸಾರ್ವಜನಿಕವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯ ಸರ್ಕಾರ ಮತ್ತು ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅವರು ಲೇವಡಿ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button