Belagavi NewsBelgaum NewsKannada NewsKarnataka NewsLatest

*ಶಾಂತಲಿಂಗ ಶಿವಾಚಾರ್ಯರಿಗೆ ಹುಕ್ಕೇರಿ ಹಿರೇಮಠದ ‘ಪಂಚಾಚಾರ್ಯ ಶ್ರೀ’ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ನಗರದ ಹುಕ್ಕೇರಿ ಸಂಸ್ಥಾನ ಹಿರೇಮಠವು ಕೊಡಮಾಡುವ 2024ನೇ ವರ್ಷದ ‘ಪಂಚಾಚಾರ್ಯ ಶ್ರೀ ಪ್ರಶಸ್ತಿ’ಯನ್ನು ಧಾರವಾಡ ತಾಲೂಕು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಗೆ ನೀಡಲಾಗುತ್ತಿದೆ ಎಂದು ಹುಕ್ಕೇರಿ ಸಂಸ್ಥಾನ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪ್ರತೀ ವರ್ಷ ಯುಗಾದಿಯಂದು ಶ್ರೀಜಗದ್ಗುರು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವದ ನೆನಪಿನಲ್ಲಿ ಹಿರಿಯ ಮಠಾಧೀಶರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ.

ಶ್ರೀಶಾಂತಲಿಂಗ ಶ್ರೀಗಳು ತಮ್ಮ 5ನೇ ವಯಸ್ಸಿನಲ್ಲಿಯೇ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಗುರುತ್ವಾಧಿಕಾರ ಪಡೆದಿದ್ದು, ತಮ್ಮ ಸುದೀರ್ಘ ಸನ್ಯಾಸದ ಬದುಕಿನಲ್ಲಿ ಯಶಸ್ಸಿನ 90 ವಸಂತಗಳನ್ನು ಕಂಡಿದ್ದಾರೆ. ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಮಕ್ಕಳ ವಿದ್ಯಾರ್ಜನೆಗಾಗಿ ತಮ್ಮ ಶ್ರೀಮಠದ ಆಶ್ರಯದಲ್ಲಿ ’ಶ್ರೀಶಾಂತೇಶ್ವರ ಪ್ರೌಢ ಶಾಲೆಯನ್ನು (1965), ಜೊತೆಗೆ ಕನ್ನಡ ಪ್ರಾಥಮಿಕ ಶಾಲೆಯನ್ನು(1991) ಪ್ರಾರಂಭಿಸಿ ಮುನ್ನಡೆಸಿದ್ದಾರೆ. ಉಭಯ ಶಾಲೆಗಳು ಇಂದು ಶಾಲಾ ಶಿಕ್ಷಣ ಇಲಾಖೆಯಿಂದ ಅನುದಾನಕ್ಕೆ ಒಳಪಟ್ಟಿವೆ. ಬಡ ಜಾಣ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶ್ರೀಮಠದಲ್ಲಿ ಅವಕಾಶ ಕಲ್ಪಿಸಿ ಅವರ ಬಾಳಿಗೆ ಬೆಳಕಾಗಿದ್ದಾರೆ.

ಆರಂಭದಿಂದಲೂ ಲಿಂಗಪೂಜಾ ನಿಷ್ಠರು. ಸೂರ್ಯೋದಯಕ್ಕೂ ಮುನ್ನವೇ ಇಷ್ಟಲಿಂಗಾರ್ಚನೆ ಪೂರೈಸುತ್ತಿದ್ದು, ಪ್ರಸ್ತುತ ಇಳಿವಯಸ್ಸಿನಲ್ಲಿಯೂ ಮುಂದುವರೆಸಿದ್ದಾರೆ. ವಿವಿಧ ಧರ್ಮಕ್ಷೇತ್ರಗಳಲ್ಲಿ ಇಷ್ಟಲಿಂಗಾನುಷ್ಠಾನ ಕೈಕೊಂಡು ಆತ್ಮಬಲ ಸಂಪಾದಿಸಿಕೊಂಡಿದ್ದಾರೆ. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಕಿರಿಯ ಶ್ರೀಗಳಾದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ಯುಗಾದಿಯ ದಿನ (ಏ.9 ರಂದು ಮಂಗಳವಾರ) ಮುಂಜಾನೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button