ಸರ್ಕಾರಿ ಆದೇಶ ಪತ್ರ ನೀಡಿ, ಸಿಎಂ ಗೌರವ ಸನ್ಮಾನ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಥಮ ಜಯದ ಹಿನ್ನೆಲೆಯಲ್ಲಿ ಇಂದು ( ಮಾರ್ಚ್ 30) ಸಿಎಂ ನಿವಾಸದಲ್ಲಿ ಹೋರಾಟದ ರೂವಾರಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಿಗೆ ಸಿಎಂ ಬೊಮ್ಮಾಯಿ ಸರ್ಕಾರಿ ಆದೇಶ ಪತ್ರ ನೀಡಿ ಗೌರವ ಸನ್ಮಾನ ಮಾಡಿದರು.
ಲಿಂಗಾಯತ ಪಂಚಮಸಾಲಿಯೊಂದಿಗೆ ಎಲ್ಲಾ ಲಿಂಗಾಯತರಿಗೂ ಮೀಸಲಾತಿಯಲ್ಲಿ ಅವಕಾಶ ಕಲ್ಪಿಸಿ ಕೊಟ್ಟು ಅದೇಶ ಮಾಡಿದ ಮುಖ್ಯಮಂತ್ರಿಗಳಿಗೆ ಶ್ರೀ ಪೀಠದಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಚುನಾವಣೆ ನಂತರ ಮೀಸಲಾತಿ ಹೆಚ್ಚಳಕ್ಕಾಗಿ, ಕೆಂದ್ರ ಒಬಿಸಿಗಾಗಿ ಹೋರಾಟ ಮಾಡಲಾಗುವುದು ಎಂದರು.
ನಾವು ಎರಡು ವರ್ಷದ ಎರಡು ತಿಂಗಳಿಂದ ಪಂಚಮಸಾಲಿ, ಲಿಂಗಾಯತ ಗೌಡ , ಮಲೆಗೌಡ ದೀಕ್ಷಾ ಲಿಂಗಾಯತ, ಮಕ್ಕಳಿಗಾಗಿ ಶ್ರೀಪೀಠವನ್ನು ಬಿಟ್ಟು ಪಾದಯಾತ್ರೆ , ಸಮಾವೇಶ , ಸತ್ಯಾಗ್ರಹ ಮೂಲಕ ಐತಿಹಾಸಿಕ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ನಾವು ಕೇಳಿದ್ದು ಶೇ 15 ರ 2ಎ ಮೀಸಲಾತಿ. ಅದರೆ ಸರ್ಕಾರ ಶೇ 7 ರ 2d ಎಂಬ ನೂತನ ಮೀಸಲಾತಿ ಸೃಷ್ಟಿ ಮಾಡಿತು. 2ಎ ಮೀಸಲಾತಿ ಪಡೆಯಲು ಉಚ್ಚ ನ್ಯಾಯಾಲಯದಲ್ಲಿ ತಡೆ ಇರುವುದರಿಂದ 2d ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ ಸರ್ಕಾರ ಶೇ 7 ರ ಮೀಸಲಾತಿ ಕೊಟ್ಟಿರುವುದು ನಮ್ಮ ನಿರಂತರ ಹೋರಾಟಕ್ಕೆ ಪ್ರಥಮ ಐತಿಹಾಸಿಕ ಜಯವಾಗಿದೆ ಎಂದು ಸ್ವಾಮಿಗಳು ಹೇಳಿದರು.
ನಮ್ಮ ಹೋರಾಟದಿಂದ ಎಲ್ಲಾ ಲಿಂಗಾಯತ ಒಳಪಂಗಡಗಳಿಗೆ ಹಾಗೂ ಇತರೆ ಸಮಾಜಗಳಿಗೆ ಮೀಸಲಾತಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಸಮಾಜ ನಮ್ಮದು ಎಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ. ಲಿಂಗಾಯತ ಪಂಚಮಸಾಲಿ ಮೀಸಲಾತಿ ಆದೇಶ ಪತ್ರ ದೊರೆತ ಕಾರಣ ಸಮಾಜ ಬಾಂಧವರು ಗ್ರಾಮ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ವಿಜಯೋತ್ಸವ ಮಾಡಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದ್ರಾಕ್ಷಿ ನಿಗಮದ ಅಧ್ಯಕ್ಷ ಎಂ ಎಸ್ ರುದ್ರಗೌಡ, ಶಾಸಕ ಸಿದ್ದುಸವದಿ , ಮಾಜಿ ಸಚಿವ ಶಶಿಕಾಂತ್ ನಾಯಕ , ಪಂಚಸೇನಾ ಅಧ್ಯಕ್ಷ ಡಾ ಬಿ ಎಸ್ ಪಾಟೀಲ್ ನಾಗರಳ್ ಹುಲಿ , ಯುವ ಅಧ್ಯಕ್ಷ ಗುಂಡು ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ