Latest

ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ಪಂಚಮಸಾಲಿ ಶ್ರೀ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ನೀಡಿದ್ದ ಭರವಸೆಗಳ ಬಗ್ಗೆ ಮತ್ತೆ ನೆನಪಿಸಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಸರ್ಕಾರಕ್ಕೆ ಅಂತಿಮ ಗಡುವಿನ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಚಮಸಾಲಿ ಶ್ರೀಗಳು, 2ಎ ಮೀಸಲಾತಿಗಾಗಿ ಆಗ್ರಹಿಸಿ ಆಗಸ್ಟ್ 15ರಿಂದ ಸೆ.30ರವರೆಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುತ್ತದೆ. ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಿಂದ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಪ್ರತಿ ತಾಲೂಕು ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಯಡಿಯೂರಪ್ಪ ನೇತೃತ್ವದಲ್ಲಿನ ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ನೀಡಿತ್ತು. ಈಗ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆ ಭರವಸೆಗಳನ್ನು ಈಡೇರಿಸಬೇಕು. ಸೆ.15ರೊಳಗೆ ಕೊಟ್ಟ ಮಾತಿನಂತೆ ಮೀಸಲಾತಿ ಘೋಷಿಸದಿದ್ದರೆ ಅಕ್ಟೋಬರ್ 1ರಿಂದ ಸತ್ಯಾಗ್ರಹ ಆರಂಭಿಸುತ್ತೇವೆ. ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗಕ್ಕೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಕಲ್ಪಿಸಿ ಕೊಡುತ್ತಾರೆ ಎಂದು ನಾಡಿನ ಸಮಾಜ ಬಾಂಧವರು ನಂಬಿದ್ದರು. ಆದರೆ, ಕಾಣದ ಕೈಗಳ ಒತ್ತಡದಿಂದ ಈ ಸದವಕಾಶ ಕೈತಪ್ಪಿದ್ದು ಸಮಾಜಕ್ಕೆ ಅಗೌರವವಾಗಿದೆ ಎಂದು ಸಮಾಜ ಭಾಂದವರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದ್ದರಿಂದ, ಕೂಡಲೇ ಈಗ ಆಗಿರುವ ರಾಜಕೀಯ ಪ್ರಾತಿನಿಧ್ಯದ ಅನ್ಯಾಯವನ್ನು ಸರಿಪಡಿಸಿ ಜನಸಂಖ್ಯೆಗೆ ಅನುಗುಣವಾಗಿ ಸಮಾಜಕ್ಕೆ ಉನ್ನತ ಅವಕಾಶವನ್ನು ಬಿಜೆಪಿ ವರಿಷ್ಠರು ಕಲ್ಪಿಸಿಕೊಡುತ್ತಾರೆ ಎಂದು ನಾವು ನಂಬಿದ್ದೇವೆ.

ಒಂದು ವೇಳೆ ಈ ಆಶಯವನ್ನು ಕಡೆಗಣಿಸಿದ್ದೇ ಆದರೆ ಮೀಸಲಾತಿ ಹಾಗೂ ಮುಖ್ಯಮಂತ್ರಿ ಸ್ಥಾನ ಎರಡನ್ನೂ ಕಲ್ಪಿಸದೆ ಬಿಜೆಪಿ ವರಿಷ್ಠರು ಸಮಾಜಕ್ಕೆ ಅಗೌರವ ಮಾಡುತ್ತಿದ್ದಾರೆ ಎಂದೇ ತೀರ್ಮಾನಿಸಿ ಮುಂದಿನ ದಿನಗಳಲ್ಲಿ ಸಮಾಜದ ಬಾಂಧವರು ತಮ್ಮ ಅಸಮಾಧಾನವನ್ನು ಚುನಾವಣೆ ಸಂದರ್ಭದಲ್ಲಿ ತೋರಿಸುವ ಸಾಧ್ಯತೆ ಇದೆ ಎಂದು ಹೇಳಲು ಈ ಮೂಲಕ‌ ಎಚ್ಚರಿಸುತ್ತೇವೆ ಎಂದಿದ್ದಾರೆ.

ಹೆಚ್ಚುತ್ತಿದೆ ಕೊರೊನಾ ಸೋಂಕು; ಮತ್ತೆ ಲಾಕ್ ಡೌನ್…?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button