ಜೈಪುರ-ಕಿರಾನಾ ಘರಾಣೆಗಳ ನಾದಸಂಗಮ
ಪ್ರಗತಿವಾಹಿನಿ ಸುದ್ದಿ: ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಕ್ಷಮತಾ ಸಂಸ್ಥೆಗಳು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಸಂಗೀತೋತ್ಸದಲ್ಲಿ ಶುಕ್ರವಾರ ಮೊದಲ ದಿನ ಜೈಪುರ ಅತ್ರೌಲಿ ಹಾಗೂ ಕಿರಾನಾ ಘರಾನಾ ಗಾಯಕಿಯಗಳ ನಾದಸಂಗಮವಾಗಿ ಮಾರ್ಪಟ್ಟಿತು.
ಪುಣೆಯ ಯಶಸ್ವಿ ಸರಪೋತದಾರ ಅವರದು ಜೈಪುರ ಅತ್ರೌಲಿ ಗಾಯನಶೈಲಿಯಾದರೆ, ಪಂ. ಜಯತೀರ್ಥ ಮೇವುಂಡಿಯವರದು ಕಿರಾನಾ ಘರಾಣೆಯ ಶೈಲಿ. ಸಂಗೀತೋತ್ಸವಕ್ಕೆ ಚಾಲನೆ ದೊರೆತಿದ್ದು ಯಶಸ್ವಿ ಸರಪೋತದಾರ ಅವರ ಗಾಯನದೊಂದಿಗೆ. ಅವರು ರಾಗ ಶುದ್ಧಕಲ್ಯಾಣದೊಂದಿಗೆ ತಮ್ಮ ಗಾಯನ ಕಚೇರಿಗೆ ಮುನ್ನುಡಿ ಬರೆದರು. ವಿಲಂಬಿತ್ ಏಕತಾಲ್‌ನಲ್ಲಿ ‘ಸಾಂಝ್ ಭಯಿ…’ ಹಾಗೂ ಧೃತ್‌ಲಯದ ತೀನತಾಲ್‌ನಲ್ಲಿ ‘ಬಾಜೋ ರೇ…’ ಬಂದಿಶ್‌ಗಳನ್ನು ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ನಂತರ ರಾಗ ದುರ್ಗಾದಲ್ಲಿ ಮಧ್ಯಲಯ ಝಪ್‌ತಾಲ್‌ನಲ್ಲಿ ‘ಸಖಿ ಮೋರಿ…’ ಹಾಗೂ ಅತ್ಯಂತ ಮನಮೋಹಕ ತರಾನಾ ಸಾದರಪಡಿಸಿದರು. ಸಂತ ಜ್ಞಾನೇಶ್ವರ ವಿರಚಿತ ಮರಾಠಿ ಅಭಂಗದ ಪ್ರಸ್ತುತಿ ತುಂಬ ಭಾವಪೂರ್ಣವಾಗಿತ್ತು.
ನಂತರ ವೇದಿಕೆಯನ್ನು ಅಲಂಕರಿಸಿದವರು ಕಿರಾನಾ ಘರಾಣೆಯ ಮೇರು ಪ್ರತಿಭೆ ಪಂ. ಜಯತೀರ್ಥ ಮೇವುಂಡಿ. ಗುರುವಾರವಷ್ಟೆ ಅಯೋಧ್ಯೆಯ ರಾಮಲಲ್ಲಾನೆದುರು ಸಂಗೀತ ಸೇವೆ ಸಲ್ಲಿಸಿ ಆಗಮಿಸಿದ್ದ ಜಯತೀರ್ಥ, ಗೋರಖ ಕಲ್ಯಾಣ ರಾಗದ ಪ್ರಸ್ತುತಿಯೊಂದಿಗೆ ತಮ್ಮ ಗಾಯನವನ್ನು ಆರಂಭಿಸಿದರು. ವಿಲಂಬಿತ್ ಲಯದ ನಿರಾತಂಕ ಅವಕಾಶದಲ್ಲಿ ಮತ್‌ತಾಲನಲ್ಲಿ ‘ಏರಿ ಆಲಿ ಮೋರೆ…’ ಹಾಗೂ ಧೃತ್‌ನ ಅಡಾ ಚೌತಾಲ್‌ನಲ್ಲಿ ‘ಜಾನೇ ನಹೀಂ ದೂಂಗಿ ಬಾಲಮಾ…’ ಬಂದಿಶ್‌ಗಳು ವಿದ್ವತ್ಪೂರ್ಣವಾಗಿ ಮೂಡಿಬಂದವು. ನಂತರ ಪಂ. ಕುಮಾರ ಗಂಧರ್ವರಿಂದ ರಚಿತ ರಾಗ ಜೈತಭೂಪ್‌ನಲ್ಲಿ ‘ನಿಮೋರಿಕಾ ಮೋರಾ ರೆ…’ ಚೀಜ್ ಮನಮೋಹಕವಾಗಿ ಹರಿದುಬಂತು. ಕೊನೆಯಲ್ಲಿ ಸೋಹನಿ ರಾಗದಲ್ಲಿ ಪಂ. ಕುಮಾರ ಗಂಧರ್ವರು ರಚಿಸಿದ ಸುಪ್ರಸಿದ್ಧ ಬಂದಿಶ್ ‘ರಂಗ ನ ಡಾರೋ ಶ್ಯಾಮ್‌ಜಿ…’ ಪ್ರಸ್ತುತಿಯೊಂದಿಗೆ ಮೊದಲ ದಿನಕ್ಕೆ ತೆರೆ ಎಳೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ