Kannada NewsKarnataka NewsLatestPolitics
*ನಾನೂ ಸಿಎಂ ಸ್ಥಾನದ ಆಕಾಂಕ್ಷಿ; ಮೊದಲಿನಿಂದಲೂ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ ಎಂದ ಗೃಹ ಸಚಿವ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆದಿರುವಾಗಲೇ ಗೃಹ ಸಚಿವ ಪರಮೇಶ್ವರ್ ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಾನೂ ಸಿಎಂ ಸ್ಥಾನದ ಆಕಾಂಕ್ಷಿ. ಮೊದಲಿನಿಂದಲೂ ಸಿಎಂ ಆಗಬೇಕು ಎಂದು ಆಸೆಯಿದೆ. ಬದಲಾವಣೆ ವಿಚಾರ ಬಂದಾಗ ನೋಡೋಣ ಎಂದರು.
ನಾನು ಯಾವತ್ತೂ ಸಿಎಂ ರೇಸ್ ನಲ್ಲಿ ಇರುತ್ತೇನೆ. 2013ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದ್ವಿ. ನಾನೊಬ್ಬನೇ ಅಧಿಕಾರಕ್ಕೆ ತಂದಿದ್ದು ಎಂದು ನಾನೆಲ್ಲೂ ಹೇಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೆವು. ಕೆಪಿಸಿಸಿ ಅಧ್ಯಕ್ಷರಾದವರಿಗೆ ಸಿಎಂ ಹುದ್ದೆಗೆ ಆಯ್ಕೆಯಾಗುವ ಅವಕಾಶವಿರುತ್ತದೆ. ಆದರೆ ಅದು ಎಲ್ಲಾ ಸಂದರ್ಭಗಳಲ್ಲಿಯೂ ಆಗಿಬಿಡಲ್ಲ. ಅಂದು ನಾನು ಚುನಾವಣೆಯಲ್ಲಿ ಸೋತೆ. ಗೆದ್ದಿದ್ದರೆ ಏನಾದರೂ ಆಗುತ್ತಿತ್ತೋ ಏನೋ ಗೊತ್ತಿಲ್ಲ ಎಂದು ಹೇಳಿದರು.



