ಪ್ರಗತಿವಾಹಿನಿ ಸುದ್ದಿ: ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆತನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ದರ್ಶನ್ ಪ್ರಕರಣ ಮಾತ್ರವಲ್ಲ ಜೈಲಿನಲ್ಲಿ ಇತರ ಯಾವುದೇ ಅವ್ಯವಹಾರ ಪ್ರಕರಣ ನಡೆದರೂ ನಮ್ಮನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಜೈಲಧಿಕಾರಿಗಳು, ಸಿಬ್ಬಂದಿಗಳು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದಲ್ಲಿ ಸಹಾಯಕ ಜೈಲಧಿಕಾರಿ ಸೇರಿ ಏಳು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು. ಇನ್ನಷ್ಟು ಸಿಬ್ಬಂದಿ ವಿರುದ್ಧವೂ ಕ್ರಮಕ್ಕೆ ಸೂಚಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳು ಯಾವುದೇ ಪ್ರಕರಣ ನಡೆದರೂ ನಮ್ಮನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಕೆ ಎಸ್ ಐ ಎಸ್ ಎಫ್ ಅಧಿಕಾರಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೈಲಿಗೆ ಯಾರೇ ಬರಲಿ, ಯಾವುದೇ ವಸ್ತುಗಳು ಬರಲಿ ಕರ್ನಾಟಕ ಕೈಗಾರಿಕ ಭದ್ರತಾ ದಳದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಜೈಲಿನ ಸಿಬ್ಬಂದಿ ಶೂ, ಬೆಲ್ಟ್ ತೆಗೆಸಿ ಪರಿಶೀಲನೆ ನಡೆಸುತ್ತಾರೆ. ಇಷ್ಟಾದರೂ ಜೈಲಿನಲ್ಲಿ ಮೊಬೈಲ್, ಸಿಗರೇಟ್ ಸೇರಿದಂತೆ ಇತರೆ ವಸ್ತುಗಳು ಬಂದಿದ್ದು ಹೇಗೆ? ಅವರ ಕುಮ್ಮಕ್ಕಿನಿಂದಲೇ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಕೆ ಎಸ್ ಐ ಎಸ್ ಎಫ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೇ ಜೈಲಿನ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಅವರ ವಿರುದ್ಧವೂ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ