LatestNationalPolitics

*ಸಂಸತ್ ಮುಂಗಾರು ಅಧಿವೇಶನ ಆರಂಭ: ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ವಿಪಕ್ಷಗಳ ಗದ್ದಲ*

ಕಲಾಪ ಕೆಲ ಕಾಲ ಮುಂದೂಡಿಕೆ


ಪ್ರಗತಿವಾಹಿನಿ ಸುದ್ದಿ: ಸಂಸತ್ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಆಗಸ್ಟ್ 13 ರವರೆಗೆ ಒಟ್ಟು 19 ದಿನಗಳ ಕಾಲ ನಡೆಯಲಿದೆ. ಅಧಿವೇಶನ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ಸದಸ್ಯರು ಗದ್ದಲ ನಡೆಸಿದ್ದು, ಕೆಲಕಾಲ ಕಲಾಪ ಮುಂದೂಡಿಕೆಯಾಗಿದೆ.

Home add -Advt

ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆಯೇ ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನ ಹಾಗೂ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷ ನಾಯಕರು ಸದನದಲ್ಲಿ ಭಾರಿ ಗದ್ದಲ ಸೃಷ್ಟಿಸಿದರು.

ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಇನ್ನು ಸಂಸತ್ ಕಲಾಪ ಆರಂಭಕ್ಕೂ ಮುನ್ನಾ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ದೇಶದ ಭದ್ರತೆ, ಖಾಸಗಿ ಬಾಹ್ಯಾಕಾಶ ವಲಯದ ಯಶಸ್ಸು ಮತ್ತು ಜಾಗತಿಕ ಸವಾಲುಗಳ ನಡುವೆಯೂ ಭಾರತ ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ಇಡೀ ಜಗತ್ತು ಹಾಗೂ ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮತ್ತು ಸಂಘರ್ಷದ ಪರಿಸ್ಥಿತಿ ಎದುರಾಗಿದ್ದರೂ ಭಾರತದ ಆರ್ಥಿಕತೆ ಶಕ್ತಿಯುತವಾಗಿ ಬೆಳೆದಿದೆ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ತೀವ್ರ ಸವಾಲುಗಳು ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದಿಂದ ಬಿಕ್ಕಟ್ಟು ಸೃಷ್ಟಿಯಾಗಿದ್ದರೂ ಸಹ, ಭಾರತವು ಶೇಕಡಾ 7.7 ರಷ್ಟು ಭಾರಿ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಷಯ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಕೈರೂಟ್’ ಇತ್ತೀಚೆಗೆ ಸಾಧಿಸಿದ ರಾಕೆಟ್ ಉಡಾವಣೆಯ ಐತಿಹಾಸಿಕ ಯಶಸ್ಸನ್ನು ಪ್ರಧಾನಿ ವಿಶದವಾಗಿ ಸ್ಮರಿಸಿದರು.

ಕಳೆದ ವರ್ಷ ನಮ್ಮ ಭಾರತೀಯ ನಾಗರಿಕನೊಬ್ಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಈಗ ನಮ್ಮ ಯುವಕರು ಬಾಹ್ಯಾಕಾಶಕ್ಕೆ ಹೊಸ ಖಾಸಗಿ ಪ್ರಯಾಣ ಆರಂಭಿಸಿದ್ದಾರೆ.ಭಾರತದ ಯುವಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ ಎಂದರು. ಸಂಸತ್ತಿನ ಕಲಾಪಗಳ ಕುರಿತು ಮಾತನಾಡಿದ ಪ್ರಧಾನಿ, ಅಧಿವೇಶನವು ಅತ್ಯಂತ ಫಲಪ್ರದವಾಗಿ ಮತ್ತು ಪ್ರಗತಿದಾಯಕವಾಗಿ ನಡೆಯಲಿ ಎಂದು ಆಶಿಸಿದರು.

Related Articles

Back to top button