ಕೆ.ಜಿ.ಕೃಪಾಲ್
ವಿಶ್ವದಾದ್ಯಂತ ಆವರಿಸಿಕೊಂಡಿರುವ ಕೊರೋನಾ ಎಂಬ ಮಹಾಮಾರಿಯು ಅನೇಕ ನಿರಪಾರಾಧಿಗಳನ್ನು ಸಹ ಬಲಿ ತೆಗೆದುಕೊಂಡಿರುವುದಲ್ಲದೆ ಎಲ್ಲಾ ದೇಶಗಳ ಸರ್ಕಾರಗಳನ್ನು ತುದಿಗಾಲಲ್ಲಿ ನಿಲ್ಲಿಸಿ ಅಗತ್ಯವಿರುವ ರಕ್ಷಣಾ ಕಾರ್ಯಗಳನ್ನು ಕೈಗೆತ್ತಿಗೊಳ್ಳುವಂತೆ ಮಾಡಿದೆ. ಈ ವೈರಸ್ ಸಮಾಜವನ್ನು ಯಾವ ಭೇದವಿಲ್ಲದೆ ಒಗ್ಗೂಡಿಸುವ ಕಾರ್ಯವನ್ನು ಮಾಡಿದೆ. ಎಲ್ಲಾ ಸರ್ಕಾರಗಳು ವಿವಿಧ ರೀತಿಯ ಆರ್ಥಿಕ ಸೌಲಭ್ಯಗಳನ್ನು , ಸವಲತ್ತುಗಳನ್ನು ಒದಗಿಸಿ ಜನರ ಅಗತ್ಯ ಒದಗಿಸುವ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಮಾಡುತ್ತಿವೆ. ಆದರೆ ದೇಶದ ಖಜಾನೆಯು ಈ ರೀತಿಯ ಭಾರಿ ಒತ್ತಡವನ್ನು ಎದುರಿಸುವುದು ಸುಲಭವಲ್ಲ. ಜೊತೆಗೆ ಹೆಚ್ಚಿನ ಕಾರ್ಪೊರೇಟ್ ಗೃಹಗಳು ತಮ್ಮೆಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ ಅಥವಾ ಕಡಿತಗೊಳಿಸಿವೆ. ಇದರಿಂದ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ಬೀಳಲಿದೆ. ವಿವಿಧ ರೇಟಿಂಗ್ ಕಂಪನಿಗಳು ಹಲವಾರು ದೇಶಗಳ ರೇಟಿಂಗ್ ಗಳನ್ನೂ ಕಡಿತಗೊಳಿಸಿವೆ. ಈ ರೀತಿಯ ರೇಟಿಂಗ್ ಗಳಿಗೆ ಸಮಯ ನಿರ್ಬಂಧವಿಲ್ಲ, ಅಂದರೆ ಈ ರೇಟಿಂಗ್ ಗಳು ಯಾವಾಗ ಬೇಕಾದರೂ ಬದಲಾಗಬಹುದು. ಆದ್ದರಿಂದ ಬೆಳವಣಿಗೆಗಿಂತ ಪರಿಸ್ಥಿತಿಯನ್ನು ಸಹಜತೆಗೆ ತರುವುದೇ ಸರ್ಕಾರಗಳ ಮುಖ್ಯ ಗುರಿಯಾಗಿದೆ.
ಇಂತಹ ಆರ್ಥಿಕ ಹಿಂಜರಿತದ ರೀತಿಯ ಸಂದರ್ಭದಲ್ಲಿ ಇಂದು ಮಾಧ್ಯಮಗಳಲ್ಲಿ ಒಂದು ವಿಚಾರ ಹೊರಬಿದ್ದಿದೆ. ಅದೆಂದರೆ ಮಾರ್ಚ್ ತಿಂಗಳಲ್ಲಿ ಮ್ಯುಚುಯಲ್ ಫಂಡ್ ಗಳ ಎಸ್ ಐ ಪಿ ಮೂಲಕ ಮಾರ್ಚ್ ತಿಂಗಳಲ್ಲಿ ರೂ.8,641 ಕೋಟಿಯಷ್ಟು ಸಂಗ್ರಹವಾಗಿ ಈ ವರ್ಷದ ಗರಿಷ್ಟ ಸಂಗ್ರಹಣೆಯ ದಾಖಲೆ ನಿರ್ಮಿಸಿದೆ. ಈ ಪರಿಸ್ಥಿತಿಗೆ ಮುಖ್ಯ ಕಾರಣ ಈಗಲೂ ಬಹಳಷ್ಟು ಹೂಡಿಕೆದಾರರಲ್ಲಿ ಎಸ್ ಐ ಪಿ ಮೂಲಕ ಹೂಡಿಕೆಯು ಸುರಕ್ಷಿತ ಎಂಬ ಭಾವನೆ. ಈ ರಭಸದ ಬದಲಾವಣೆ ಯುಗದಲ್ಲಿ ಮ್ಯುಚುಯಲ್ ಫಂಡ್ ಹೂಡಿಕೆಯು ಸಹ ಪೇಟೆಯ ಏರಿಳಿತಗಳಿಗೊಳಪಡುತ್ತವೆ ಎಂಬುದನ್ನು ಮರೆತುಬಿಡುತ್ತಾರೆ.
ಮ್ಯುಚುಯಲ್ ಫಂಡ್ ಗಳು ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಗ್ರಾಹಕರ ಇಚ್ಛೆಯಂತೆ ವಿವಿಧ ಅನುಪಾತಗಳಲ್ಲಿ ಇಕ್ವಿಟಿ, ಡೆಟ್ ನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವರು. ಇಡೀ ಪೇಟೆಯೇ ಭರ್ಜರಿ ಕುಸಿತ ಕಂಡಾಗ ಹೂಡಿಕೆ ಮಾಡಿದ ಹಣದ ಎನ್ ಎ ವಿ ಸಹ ಅದಕ್ಕನುಗುಣವಾಗಿ ಕುಸಿಯುವ ಅಂಶವನ್ನು ಮಾತ್ರ ಹೂಡಿಕೆದಾರರು ಗಮನಿಸಿರಲಾರರು. ಮಾನಸಿಕವಾಗಿ ಎಸ್ ಐ ಪಿ ಗಳಲ್ಲಿ ಹೂಡಿಕೆ ಮಾಡಿದಲ್ಲಿ ಹಣ ಸುರಕ್ಷತೆಯಿಂದ ಬೆಳವಣಿಗೆ ಕಾಣುತ್ತದೆ ಎಂಬ ಮಾನಸಿಕ ಕಲ್ಪನೆಯೇ ಈ ಸಂಗ್ರಹಣೆಯ ಹಿಂದಿನ ಸತ್ಯ. ಷೇರುಪೇಟೆಯಲ್ಲಿ ಷೇರಿನ ದರಗಳು ಎಷ್ಟು ಕ್ಷಿಪ್ರ ಮತ್ತು ತ್ವರಿತ ಏರಿಳಿತಗಳನ್ನು ಕಾಣುತ್ತಿದೆ ಎಂದರೆ ಜನವರಿ 20 ರಂದು 42,273 ಪಾಯಿಂಟುಗಳ ಸರ್ವಕಾಲೀನ ಗರಿಷ್ಠದ ದಾಖಲೆ ನಿರ್ಮಿಸಿದ ಸೆನ್ಸೆಕ್ಸ್ ಕೇವಲ ಎರಡೇ ತಿಂಗಳಷ್ಟು ಅವಧಿಯಲ್ಲಿ ರೂ.25,638ಪಾಯಿಂಟುಗಳಿಗೆ ಕುಸಿದಿರುವುದು ಪೇಟೆಯ ಚಂಚಲತೆಗೆ ಹಿಡಿದ ಕನ್ನಡಿಯಾಗಿದೆ.
24 ನೇ ಮಾರ್ಚ್ ಸೆನ್ಸೆಕ್ಸ್ 25,638ಪಾಯಿಂಟುಗಳಿಗೆ ಕುಸಿದು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿತು. ಆದರೆ 25 ರಂದು 28,535 ಪಾಯಿಂಟುಗಳಿಗೆ ತಲುಪಿ ಸುಮಾರು 2,896ಪಾಯಿಂಟುಗಳ ಏರಿಕೆಯನ್ನು ಕಂಡಿದೆ. ಅಂದರೆ ಶೇ.10 ಕ್ಕೂ ಹೆಚ್ಚಿನ ಏರಿಕೆಯನ್ನು ಕಂಡಿದೆ. ಆದರೆ ಕೆಲವು ಅಗ್ರಮಾನ್ಯ ಕಂಪನಿಗಳ ಬೆಲೆ ಏರಿಕೆಯು ಇದಕ್ಕೂ ಹೆಚ್ಚಾಗಿತ್ತು. ಇದು ಪೇಟೆಯ ಚಂಚಲತೆಯ ವೇಗವನ್ನು ತಿಳಿಸುತ್ತದೆ. ಕೆಲವು ಕಂಪನಿ ಷೇರಿನ ಬೆಲೆಗಳು ಪ್ರದರ್ಶಿಸಿದ ರಭಸದ ಎರಿಳಿತಗಳು ಅನಿರೀಕ್ಷಿತ ಎನ್ನುವುದಕ್ಕಿಂತ ಅಪೇಕ್ಷಿತ ಎನ್ನುವಂತಿದೆ. ಕಳೆದ ಫೆಬ್ರವರಿ 20 ರಿಂದ ನಿರಂತರವಾಗಿ, ಏಕಮುಖವಾಗಿ ಮಾರಾಟದ ಹಾದಿಯಲ್ಲಿ ಸಾಗುತ್ತಿರುವ ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟದ ಭರಾಟೆಯನ್ನೆದುರಿಸಲು ಸ್ವದೇಶಿ ವಿತ್ತೀಯ ಸಂಸ್ಥೆಗಳು ಸನ್ನದ್ಧವಾಗಿವೆ ಎಂದರೆ ಫೆಬ್ರವರಿ 24 ರಿಂದ ನಿರಂತರವಾಗಿ ಏಕಮುಖವಾಗಿ ಖರೀದಿಯ ಹಾದಿಯಲ್ಲಿ ಸಾಗಿ ಪೇಟೆಯನ್ನು ಬೆಂಬಲಿಸಿವೆ. ಅಂದರೆ ಇದೊಂದು ರೀತಿಯ ಸ್ವದೇಶಿ ಆಂದೋಲನವೆಂಬಂತಾಗಿದೆ. ಕೇವಲ ಎರಡೇ ತಿಂಗಳಲ್ಲಿ 16,635ಪಾಯಿಂಟುಗಳ ಭಾರಿ ಕುಸಿತ ಪ್ರದರ್ಶಿಸಿದ ಸೆನ್ಸೆಕ್ಸ್ ಸಧ್ಯದ ಪರಿಸ್ಥಿತಿಯಲ್ಲಿ ಸುಮಾರು 5,500ಪಾಯಿಂಟುಗಳ ಚೇತರಿಕೆಯನ್ನು ಕೇವಲ ಎರಡುವಾರಗಳ ಚಟುವಟಿಕೆಯಲ್ಲಿ ಪುಟಿದೆದ್ದಿದೆ. ಈ ಮಧ್ಯೆ ವಿದೇಶಿ ವಿತ್ತೀಯ ಸಂಸ್ಥೆಗಳು ಗುರುವಾರದಂದು ರೂ.1,943 ಕೋಟಿಯಷ್ಟು, ಶುಕ್ರವಾರದಂದು ರೂ.1,737 ಕೋಟಿ ಮೌಲ್ಯದ ಖರೀದಿ ಪೇಟೆಯಲ್ಲಿ ಷೇರುಗಳ ಬೆಲೆಗಳು ಬಾಟಮ್ ತಲುಪಿವೆ ಎಂದು ಭಾವಿಸಬಹುದಾದರೂ, ಅರ್ಥಿಕ ಸಂಕಷ್ಟದ ಕಾರಣ ಉದ್ಯಮಗಳು ಕಾರ್ಯ ನಿರ್ವಹಿಸುವುದು ಸುಸೂತ್ರವಲ್ಲ. ಹಾಗಾಗಿ ಆಂತರಿಕ ಸಾಧನೆಗಿಂತ ಭಾಹ್ಯ ಕಾರಣಗಳು ಹೆಚ್ಚು ಪ್ರಭಾವಿಯಾಗಿರುವುದರಿಂದ ರಭಸದ ಏರಿಳಿತಗಳು ಹೆಚ್ಚಾಗಿರುತ್ತದೆ. ಇದಕ್ಕನುಗುಣವಾಗಿ ಎನ್ ಎ ವಿ ಗಳು ಸಹ ತೂಗುಯ್ಯಾಲೆಯಲ್ಲಿ ಜೀಕುತ್ತವೆ.
ಹೂಡಿಕೆದಾರರು ಯಾವುದೇ ಹೂಡಿಕೆಯ ಬಗ್ಗೆ ನಿರ್ಧರಿಸುವ ಮುನ್ನ ಅದರಲ್ಲಿ ಅಡಕವಾಗಿರುವ ಅಂಶಗಳನ್ನು ಅರಿತು ನಿರ್ಧರಿಸಬೇಕು. ಸಾಮಾನ್ಯವಾಗಿ ಭಾರತದ ಜನಸಂಖ್ಯೆಯ ಶೇ 4 ರಷ್ಟು ಮಾತ್ರ ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದಿದ್ದರೂ, ಉಳಿದವರಲ್ಲಿ ಹೆಚ್ಚಿನವರು ಪರೋಕ್ಷವಾಗಿ ಷೇರುಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ ಎಂಬ ಅಂಶವನ್ನು ಗುರುತಿಸುವಲ್ಲಿ ತಪ್ಪಿದ್ದೇವೆ. ಅಂದರೆ ನೇರವಾಗಿ ಷೇರುಪೇಟೆ ಚಟುವಟಿಕೆಯಲ್ಲಿ ಭಾಗವಹಿಸದಿದ್ದರು, ಅವರು ವಿಮಾ ಯೋಜನೆಗಳಲ್ಲಿ, ಎಸ್ ಐ ಪಿ ಗಳ ಮೂಲಕ ಮ್ಯುಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಅಪಾರವಾಗಿದೆ. ಇವರುಗಳಿಂದ ಸಂಗ್ರಹಿಸಿದ ಹಣವು ಷೇರುಪೇಟೆ ಪ್ರವೇಶಿಸುತ್ತದೆ.
ಈಗ ಸರ್ಕಾರಿ ಯೋಜನೆ ಹೊರತುಪಡಿಸಿ ಯಾವುದೇ ಯೋಜನೆಗಳಲ್ಲಿ ಅದು ಷೇರುಪೇಟೆಯಾಗಲಿ, ಮ್ಯುಚುಯಲ್ ಫಂಡ್ ಆಗಲಿ, ವಿಮಾ ಯೋಜನೆಗಳಾಗಲಿ ಎಲ್ಲವು ಪೇಟೆಯಲ್ಲುಂಟಾಗುವ ಏರುಪೇರುಗಳಿಗನುಗುಣವಾಗಿ ಹೂಡಿಕೆಯ ಎನ್ ಎ ವಿ ಗಳು ಬದಲಾಗುತ್ತಿರುತ್ತವೆ. ಆದ್ದರಿಂದ ಹೂಡಿಕೆಗೆ ಯಾವುದೇ ಗ್ಯಾರಂಟಿ ಎಂಬುದಿರುವುದಿಲ್ಲ. ಈಗ ವಿವಿಧ ಕಾರಣಗಳಿಂದ ಷೇರುಪೇಟೆಗಳು ಭಾರಿ ಕುಸಿತ ಕಂಡಿರುವುದರಿಂದ, ಘಟಾನುಘಟಿ ಕಂಪನಿಗಳ ಷೇರುಗಳ ಬೆಲೆಗಳು ಭಾರಿ ಕುಸಿತ ಕಂಡಿರುವುದರಿಂದ ಸೂಕ್ತ ಮಾರ್ಗದರ್ಶನದೊಂದಿಗೆ ಸ್ವಲ್ಪ ಅಧ್ಯಯನದಿಂದ ಉತ್ತಮ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ನೇರವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುವ ಅಗ್ರಮಾನ್ಯ ಕಂಪನಿಗಳು, ಆಕರ್ಷಕ ಲಾಭಾಂಶ, ಬೋನಸ್ ನಂತಹ ಕಾರ್ಪೊರೇಟ್ ಫಲಗಳನ್ನು ವಿತರಿಸುವ, ಹೂಡಿಕೆದಾರ ಸ್ನೇಹಿ ಸದೃಢ ಆಡಳಿತ ಮಂಡಳಿಗಳುಳ್ಳ ಕಂಪನಿಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಂಡು ಷೇರುಪೇಟೆಯ ಲಾಭಗಳನ್ನು ಮಧ್ಯವರ್ತಿ ಯೋಜನೆಗಳಿಲ್ಲದೆ ನೇರವಾಗಿ ಪಡೆಯಬಹುದು. ಷೇರುಪೇಟೆಯ ವೈಶಿಷ್ಟತೆ ಎಂದರೆ ಸಾಮಾನ್ಯವಾಗಿ ಬೇಕೆಂದಾಗ ಮಾರಾಟಮಾಡಿ ಹೂಡಿಕೆಯನ್ನು ನಗದೀಕರಿಸಿಕೊಳ್ಳಬಹುದಾಗಿದೆ. ಅನಿರೀಕ್ಷಿತವಾಗಿ ಅಲ್ಪಕಾಲೀನ ಅವಕಾಶಗಳು ಲಭಿಸಿದಲ್ಲಿ ದಿಢೀರ್ ನಗದೀಕರಿಸಿಕೊಂಡು ಅದೇ ಷೇರು ಮತ್ತೊಮ್ಮೆ ಕುಸಿತ ಕಂಡಾಗ ಅದನ್ನೇ ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳಬಹುದು. ನಡೆಸಿದ ಎಲ್ಲಾ ಚಟುವಟಿಕೆಗಳಿಗೂ ಸೂಕ್ತ ಕಾಂಟ್ರಾಕ್ಟ್ ನೋಟ್ ಗಳನ್ನೂ ಸುರಕ್ಷಿತವಾಗಿರಿಸಿ, ಸರಿಯಾಗಿ ಅಕೌಂಟ್ ಇಟ್ಟುಕೊಂಡಲ್ಲಿ ಇದು ಒಂದು ಸುರಕ್ಷಿತವಾದ ಹೂಡಿಕೆ ಆಧಾರಿತ ವ್ಯವಹಾರವಾಗುತ್ತದೆ. ಇಲ್ಲಿ ಹೂಡಿಕೆಯನ್ನು ಸಂಪೂರ್ಣವಾಗಿ ಒಂದೆರಡು ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಬದಲು ಹೂಡಿಕೆ ಗುಚ್ಛವನ್ನು ಹಲವಾರು ಕಂಪನಿಗಳಿಗೆ ವಿಸ್ತರಿಸಿಕೊಂಡಲ್ಲಿ ಅದು ಒಂದು ರೀತಿಯ ಶಾಕ್ ಅಬ್ಸರ್ಬರ್ ಆಗಿರುತ್ತದೆ. ಷೇರುಪೇಟೆ ಹೂಡಿಕೆ ಎರಡು ರೀತಿಯ ಲಾಭ ತಂದುಕೊಡುತ್ತದೆ. ಒಂದು ದೀರ್ಘಕಾಲೀನದಲ್ಲಿ ಅದು ಕಾರ್ಪೊರೇಟ್ ಫಲಗಳನ್ನು ಗಳಿಸಿಕೊಡುತ್ತದೆ. ಮತ್ತೊಂದು ಅಂದರೆ ಷೇರಿನ ಬೆಲೆ ಏರಿಕೆ ಕಂಡರೆ ಅದು ಹೂಡಿಕೆಯ ಹಣವನ್ನು ಹೆಚ್ಚಿಸುವ ಮೂಲಕ ಲಾಭವನ್ನು ತಂದುಕೊಡುತ್ತವೆ. ಕೆಲವೊಮ್ಮೆ ಎರಡು ಲಭಿಸುವ ಸಾಧ್ಯತೆ ಇರುತ್ತದೆ. ಎಲ್ಲಾ ಹೂಡಿಕೆ ಲಾಭ ತಂದುಕೊಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಒಂದು ವೇಳೆ ಕಂಪನಿಗಳು ಉತ್ತಮ ಫಲಿತಾಂಶ ನೀಡದಿದ್ದಲ್ಲಿ ಆ ಷೇರಿನ ಬೆಲೆ ಕುಸಿತ ಕಾಣಲೂಬಹುದು. ಅದು ಉತ್ತಮ ಕಂಪೆನಿಯಾಗಿದ್ದಲ್ಲಿ ಮತ್ತೊಮ್ಮೆ ಚೇತರಿಕೆಯಿಂದ ಪುಟಿದೇಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಒಟ್ಟಿನಲ್ಲಿ ಅಪಾಯದ ಮಟ್ಟವನ್ನರಿತು ಜಾಣ್ಮೆಯ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಮತ್ತು ಚೈತನ್ಯವನ್ನು ಷೇರುಪೇಟೆ ಚಟುವಟಿಕೆ ನಮ್ಮಲ್ಲಿ ಬೆಳೆಸುತ್ತದೆ. ಹಣ ಕೈಲಿದೆ ಎಂದು ಆತುರಪಡದೆ ಸಂದರ್ಭಕ್ಕನುಗುಣವಾಗಿ ನಿರ್ಧರಿಸುವುದು ಅಗತ್ಯ. ಆರಂಭದಲ್ಲಿ ಅಲ್ಪ ಮಟ್ಟಿನ ಹಣದಿಂದ ಅನುಭವ ಪಡೆದು ನಂತರ ಪೂರ್ಣ ಪ್ರಮಾಣದ ಹೂಡಿಕೆಗೆ ಮುಂದಾಗಬಹುದು. ಷೇರುಗಳನ್ನು ಒಂದಂಕಿ ಗಳಲ್ಲೂ ಖರೀದಿಸಬಹುದಾದ್ದರಿಂದ ಅಲ್ಪ ಅಪಾಯದಿಂದ ಅನುಭವವನ್ನು ಗಳಿಸಲೂಬಹುದು.
ಷೇರುಪೇಟೆಯ ಚಟುವಟಿಕೆಯು ಸಂಪೂರ್ಣವಾಗಿ ಟೆಕ್ನಾಲಜಿ ಆಧಾರಿತವಾದ್ದರಿಂದ ಲಾಕ್ ಡೌನ್, ಸಿಲ್ ಡೌನ್ ಸಂದರ್ಭದಲ್ಲೂ ಚಟುವಟಿಕೆಯನ್ನು ನಡೆಸಬಹುದಾಗಿದೆ. ಒಟ್ಟಿನಲ್ಲಿ ಅರಿತು ಹೂಡಿಕೆ ಮಾಡಿರಿ – ಅನುಸರಿಸಬೇಡಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ