Kannada NewsKarnataka News

ಕಚೇರಿ ವೇಳೆ ನಿರ್ಜನ ಪ್ರದೇಶಕ್ಕೆ ತೆರಳಿ ಪಾರ್ಟಿ ಮಾಡಿದ ಪಿಡಿಒ ಮತ್ತು ಕಾರ್ಯದರ್ಶಿ

ಗ್ರಾ.ಪಂ ಸದಸ್ಯರಿಂದ ತಹಸೀಲ್ದಾರ್, ತಾ.ಪಂ ಇ.ಒಗೆ ದೂರು

ಪಿಡಿಒ, ಕಾರ್ಯದರ್ಶಿ ಹಾಗೂ ಇತರರು ಪಾರ್ಟಿ ಮಾಡುತ್ತಿರುವ ಸ್ಥಳದಲ್ಲಿ ನಿಂತಿರುವ ಖಾನಾಪುರ ತಾಲ್ಲೂಕು ಬೀಡಿ ಗ್ರಾ.ಪಂ.ಗೆ ಸೇರಿದ ವಾಹನ.

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಓರ್ವ ಮಹಿಳಾ ಕಾರ್ಯದರ್ಶಿ,  ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಇತ್ತೀಚೆಗೆ ಸರ್ಕಾರಿ ಕೆಲಸದ ಅವಧಿಯಲ್ಲಿ ನಿರ್ಜನ ಸ್ಥಳಕ್ಕೆ ತೆರಳಿ ಪಾರ್ಟಿ ಮಾಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ
ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೀಡಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸುನೀಲ
ಕದಮ್, ಸಂತೋಷ ಕಾಶೀಲಕರ, ವಿಠ್ಠಲ ಪತ್ರಿ, ಫ್ರಾನ್ಸಿಸ್ ಶೇರಾಂವ ಮಂಗಳವಾರ
ತಹಸೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಇ.ಒ ಅವರ ಬಳಿ ದಾಖಲೆ ಸಮೇತ ಲಿಖಿತ ದೂರು
ಸಲ್ಲಿಸಿದ್ದಾರೆ.
“ಬೀಡಿ ಗ್ರಾಪಂ ಈಗಿನ ಪಿಡಿಒ ಮುತ್ತಣ್ಣ ಗುರವ, ಹಿಂದಿನ ಪಿಡಿಒ ಕೆ.ಎಸ್ ಗಣೇಶ್,
ಮತ್ತೋರ್ವ ಪಿಡಿಒ ಭೀಮಾಶಂಕರ, ಕಾರ್ಯದರ್ಶಿ ನೇತ್ರಾವತಿ ಎಂ.ಡಿ, ದ್ವಿ.ದ ಸಹಾಯಕಿ
ನೇತ್ರಾವತಿ ಗಿರಿ ಹಾಗೂ ಇತರರು ನ.26ರಂದು ಸರ್ಕಾರಿ ಕಚೇರಿಯ ಕೆಲಸದ ಸಮಯದಲ್ಲಿ
ಕಚೇರಿಯಲ್ಲಿದ್ದು ಕಾರ್ಯನಿರ್ವಹಿಸದೇ ಬೀಡಿ ಗ್ರಾ.ಪಂ ಕಚೇರಿಗೆ ಸೇರಿದ ಸರ್ಕಾರಿ ವಾಹನವನ್ನು ಬಳಸಿ ನಿರ್ಜನ ಪ್ರದೇಶಕ್ಕೆ ತೆರಳಿ ಪಾರ್ಟಿ ಮಾಡಿದ್ದಾರೆ. ಇವರು ಕಚೇರಿಯಲ್ಲಿದ್ದು ಸಾರ್ವಜನಿಕರ ಕೆಲಸಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸದೇ ಮೇಲಿಂದ ಮೇಲೆ ಮೀಟಿಂಗ್ ಮತ್ತು ಪಾರ್ಟಿ ಮಾಡುವ ಮೂಲಕ ಬೀಡಿ ಗ್ರಾಮ ಪಂಚಾಯ್ತಿಯ ಘನತೆಗೆ ಧಕ್ಕೆ ಬರುವಂತೆ ವರ್ತಿಸಿದ್ದಾರೆ. ಈ ವಿಷಯವಾಗಿ ತಮಗೆ ಸಾರ್ವಜನಿಕರಿಂದ ಖಚಿತ ಮಾಹಿತಿ ಮತ್ತು ತಕರಾರು ಬಂದಿದ್ದರಿಂದ ಅವರು ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಫೋಟೋ, ವಿಡಿಯೋ
ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳಿಗೆ ಸಲ್ಲಿಸಿರುವುದಾಗಿ” ಗ್ರಾಮ ಪಂಚಾಯ್ತಿ
ಸದಸ್ಯರು ತಿಳಿಸಿದ್ದಾರೆ.

ಖಾನಾಪುರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಸೇವೆಯಲ್ಲಿರುವ ಮೂವರು ಪಿಡಿಒಗಳು, ಓರ್ವ ಮಹಿಳಾ ಕಾರ್ಯದರ್ಶಿ, ದ್ವಿದ ಲೆಕ್ಕ ಸಹಾಯಕಿ ಮತ್ತಿತರರು ಸೇರಿ ಸರ್ಕಾರಿ ಕೆಲಸದ ಸಮಯದಲ್ಲಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸದೇ ನಿರ್ಜನ ಪ್ರದೇಶಕ್ಕೆ ತೆರಳಿ ಪಾರ್ಟಿ ಮಾಡಿದ್ದಾರೆ ಮತ್ತು ಪಾರ್ಟಿ ಮಾಡಲು ಸರ್ಕಾರಿ ವಾಹನವನ್ನು ಬಳಸಿದ್ದಾರೆ ಎಂದು ಮಂಗಳವಾರ ಬೀಡಿ ಗ್ರಾ.ಪಂ ಸದಸ್ಯರು ದೂರು ಸಲ್ಲಿಸಿದ್ದು,ಸರ್ಕಾರಿ ನೌಕರರ ಈ ವರ್ತನೆಯನ್ನು ತಾಲ್ಲೂಕಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯವಾಗಿ ಶೀಘ್ರವೇ ತನಿಖೆ ನಡೆಸಿ ಕ್ರಮ ಜರುಗಿಸಲಾಗುತ್ತದೆ.

-ರೇಷ್ಮಾ ತಾಳಿಕೋಟಿ, ತಹಸೀಲ್ದಾರ್, ಖಾನಾಪುರ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button