ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮೈಸೂರು ರಂಗಾಯಣ ವತಿಯಿಂದ ಬೃಹತ್ ರಂಗಪ್ರಯೋಗ “ಪರ್ವ” ನಾಟಕ ಪ್ರದರ್ಶನವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿದ್ದು, ಈ ಕುರಿತು ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ನಾಟಕ ಪ್ರದರ್ಶನದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ರಂಗಾಯಣ ಮೈಸೂರು ಉಪ ನಿರ್ದೇಶಕರಾದ ನಿರ್ಮಲಾ ಮಠಪತಿ ತಿಳಿಸಿದರು.
ಮೈಸೂರು ರಂಗಾಯಣ ವತಿಯಿಂದ ಪರ್ವ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ನಗರದ ಕಟ್ಟಿಮನಿ ಸಭಾಂಗಣದಲ್ಲಿ ಶುಕ್ರವಾರ (ಫೆ.18) ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.
ಪರ್ವ’ ನಾಟಕದ ಪ್ರದರ್ಶನವನ್ನು ರಂಗಾಯಣ ವತಿಯಿಂದ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪರ್ವ ನಾಟಕದ ಮೂಲಕ ನಾವು ಹಿರಿಯ ಸಾಹಿತಿಗೂ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನಾಟಕ ಪ್ರದರ್ಶನದ ಕುರಿತು ಗ್ರಾಮೀಣ ಭಾಗದಲ್ಲಿಯೂ ಸಹ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಠಪತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಸ್ ಗವಿಮಠ ಅವರು ಎಸ್. ಎಲ್. ಬೈರಪ್ಪ ಅವರ ಕಾದಂಬರಿ ಆಧಾರಿತ ನಾಟಕ ಪ್ರದರ್ಶನ ಇದಾಗಿದೆ. ಮಹಾಭಾರತವನ್ನು ವೈಚಾರಿಕ ದೃಷ್ಟಿಯೊಂದಿಗೆ ಕಟ್ಟಿಕೊಟ್ಟ ಈ ಕಾದಂಬರಿ ವಿದೇಶಿ ಭಾಷೆಗಳಿಗೂ ಅನುವಾದಗೊಂಡಿದ್ದು, ಜನಮನ್ನಣೆ ಪಡೆದಿದೆ ಎಂದರು.
ಎಸ್.ಎಲ್.ಭೈರಪ್ಪನವರ ಬರವಣಿಗೆಯಲ್ಲೆ ಅತ್ಯಂತ ಉತ್ಕೃಷ್ಟ ಕಾದಂಬರಿಗಳಲ್ಲಿ ಒಂದು ಈ ‘ಪರ್ವ’ ಕಾದಂಬರಿಯಾಗಿದ್ದು, ಇಂತಹ ಕಾದಂಬರಿ ಈಗ ನಾಟಕದ ಸ್ವರೂಪದಲ್ಲಿ ಜನರ ಮುಂದಿರಿಸುವ ಯತ್ನ ನಮ್ಮದಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ್, ಡಾ.ರಾಮಕೃಷ್ಣ ಮರಾಠೆ, ಶಿರಿಷ ಜೋಶಿ, ಚಂದ್ರಕಾಂತ ಪೋಕಳೆ, ಡಾ.ಎ.ಬಿ.ಘಾಟಗೆ, ರಂಗತಜ್ಞರಾದ ಸುಭಾಸ ಏಣಗಿ, ಮಲ್ಲನಗೌಡ ಪಾಟೀಲ, ಅನಂತಕುಮಾರ ಬ್ಯಾಕೂಡ, ಬಸವರಾಜ ಗಾರ್ಗಿ, ಆರ್.ಬಿ.ಕಟ್ಟಿ, ಅನಂತ ಪಪ್ಪು ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ