ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಪರ್ವ” ಮಹಾ ರಂಗಪ್ರಯೋಗ ನಾಟಕ ಪ್ರದರ್ಶನ ಬೆಳಗಾವಿ ನಗರದ ಕೊನೆವಾಳಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಏಪ್ರಿಲ್ 16 ಹಾಗೂ 17 ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿಯಲ್ಲಿ ಏಪ್ರಿಲ್ ಮಾಹೆಯಲ್ಲಿ ಆಯೋಜಿಸಲಾಗುವ ಬೃಹತ್ ರಂಗಪ್ರಯೋಗ “ಪರ್ವ” ನಾಟಕ ಪ್ರದರ್ಶನದ ಕುರಿತು ಮಾಹಿತಿಯನ್ನು ನೀಡಿದರು.
ಮಹಾ ರಂಗಪ್ರಯೋಗ “ಪರ್ವ” ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರಾಷ್ಟ್ರದ ಐದು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗೊಳ್ಳಬೇಕು ಎಂಬ ಯೋಜನೆಯನ್ನು ರಂಗಾಯಣ ರೂಪಿಸಿದೆ. ಸುಮಾರು ಎಂಟು ಗಂಟೆ ಸುದೀರ್ಘ ಅವಧಿಯ ಪರ್ವ ಮಹಾ ರಂಗಪ್ರಯೋಗ ನಾಟಕ ಬೆಳಗಾವಿಯಲ್ಲಿ ಏಪ್ರಿಲ್ 16 ಹಾಗೂ 17 ರಂದು ಮಧ್ಯಾಹ್ನ 3.30 ಗಂಟೆಯಿಂದ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಡಾ.ಎಸ್.ಎಲ್ ಭೈರಪ್ಪನವರ ಕಾದಂಬರಿ ಆಧಾರಿತ ನಾಟಕ ಪ್ರದರ್ಶನ ಇದಾಗಿದೆ. ಮಹಾಭಾರತವನ್ನು ವೈಚಾರಿಕ ದೃಷ್ಟಿಯೊಂದಿಗೆ ಕಟ್ಟಿಕೊಟ್ಟ ಈ ಕಾದಂಬರಿ ವಿಶ್ವದ ಅನೇಕ ವಿದೇಶಿ ಭಾಷೆಗಳಿಗೂ ಅನುವಾದಗೊಂಡಿದ್ದು, ಜನಮನ್ನಣೆ ಪಡೆದಿದೆ ಎಂದು ಹೇಳಿದರು.
ಕನ್ನಡ ಕಾಯಕ ವರ್ಷದ ಈ ಸಂದರ್ಭದಲ್ಲಿ ಮೈಸೂರು ರಂಗಾಯಣ ವತಿಯಿಂದ “ಪರ್ವ” ಮಹಾ ರಂಗಪ್ರಯೋಗದ ಮೂಲಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ 20 ನಾಟಕ ಪ್ರದರ್ಶನಗೊಂಡಿದೆ. ಅದೇ ರೀತಿ ಏಪ್ರಿಲ್ 16 ಹಾಗೂ 17 ರಂದು ಬೆಳಗಾವಿಯಲ್ಲಿ 2 ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
600 ಪುಟಗಳ ಬೃಹತ್ ಕಾದಂಬರಿಯನ್ನು ರಂಗ ಪ್ರಯೋಗಕ್ಕೆ ಅಳವಡಿಸುವುದು ಸವಾಲಿನ ಕೆಲಸವಾಗಿತ್ತು. ಇದನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.
ನಾಟಕ ಪ್ರದರ್ಶನದಲ್ಲಿ ಸುಮಾರು 40 ರಿಂದ 50 ಕಲಾವಿದರು ಭಾಗವಹಿಸಲಿದ್ದು, ನಟ, ನಿರ್ದೇಶಕ ಪ್ರಕಾಶ ಬೆಳವಾಡಿ ಅವರು ನಿರ್ದೇಶನ ಮಾಡಲಿದ್ದಾರೆ ಹೇಳಿದರು.
ಮಹಾ ರಂಗಪ್ರಯೋಗದ ನಾಟಕ ಪ್ರದರ್ಶನ:
ಎಪ್ರಿಲ್ 16 ಹಾಗೂ 17 ರಂದು ಮಧ್ಯಾಹ್ನ 3.30 ಗಂಟೆಗೆ ಪ್ರಾರಂಭವಾಗಿ ಸುಮಾರು 8 ಗಂಟೆಗಳ ಕಾಲ ನಾಟಕ ಪ್ರದರ್ಶನಗೊಳ್ಳಲಿದ್ದು, 4 ಬಾರಿ ವಿರಾಮ ಹಾಗೂ 30 ನಿಮಿಷ ಊಟಕ್ಕೆ ವಿರಾಮ ಇರಲಿದೆ ಎಂದು ತಿಳಿಸಿದರು.
ಪರ್ವ ಮಹಾ ರಂಗಪ್ರಯೋಗ ದೊಡ್ಡ ಪ್ರಮಾಣ ಮತ್ತು ದೀರ್ಘಕಾಲ ಪ್ರದರ್ಶನ ಇರುವುದರಿಂದ ರೂಪಾಯಿ 200 ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ.
ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಟಿಕೆಟ್ ಗಳು ಲಭ್ಯವಿರುತ್ತವೆ ಮತ್ತು ರಂಗಾಯನ ವೆಬ್ ಸೈಟ್ www.rangayana.org ನಲ್ಲಿ ಆನ್ ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಅವರು ತಿಳಿಸಿದರು.
ಕರ್ನಾಟಕದಲ್ಲಿ ಕಲಾವಿದರಿಗೆ ಮಾಹನ್ ಸ್ಥಾನವಿದೆ. ಅದರಂತೆ ಬೆಳಗಾವಿ ಕೂಡ ಕಲಾವಿದರ ನಾಡು. ಎರಡು ದಿನಗಳ ಕಾಲ ನಡೆಯುವ “ಪರ್ವ” ಮಹಾ ರಂಗಪ್ರಯೋಗ ನಾಟಕ ಪ್ರದರ್ಶನಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.
“ಪರ್ವ” ನಾಟಕ ಪ್ರದರ್ಶನಕ್ಕೆ ಹಿರಿಯ ಸಾಹಿತಿಗಳ ಸಹಕಾರ:
ಇದಕ್ಕೂ ಮುಂಚೆ ನಗರದ ಕಟ್ಟಿಮನಿ ಸಭಾಂಗಣದಲ್ಲಿ
ಡಾ.ಎಸ್. ಎಲ್ ಬೈರಪ್ಪನವರ ಮೇರು ಕೃತಿ ಪರ್ವ ನಾಟಕ ಪ್ರದರ್ಶನ ಕುರಿತು ಮೈಸೂರ ರಂಗಾಯಣದಿಂದ ಏಪ್ರೀಲ 16 ಮತ್ತು 17 ರಂದು ಬೆಳಗಾವಿಯಲ್ಲಿ ನಡೆಯಲಿರುವ ಪೂರ್ವ ಸಿದ್ಧತೆ ಕುರಿತು ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ನಾಟಕ ಪ್ರದರ್ಶನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹಿರಿಯ ಸಾಹಿತಿಗಳಾದ ಸರಜು ಕಾಟ್ಕಾರ್, ಅಶೋಕ ಚಂದರಗಿ, ಅರವಿಂದ ಕುಲಕರ್ಣಿ, ಆರ್.ಬಿ ಕಟ್ಟಿ, ಪ್ರೀಯಾ ಪುರಾಣಿಕ, ರೇಖಾ ಶಿರಗಾವಕರ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪರ್ವ ಮಹಾ ರಂಗಪ್ರಯೋಗದ ಪ್ರಚಾರಸಾಮಗ್ರಿ ಮತ್ತು ಮಾಹಿತಿ ಪುಸ್ತಿಕೆಯನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬಿಡುಗಡೆಗೊಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ