
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ. ರಾಜಕೀಯ ಸಮಾವೇಶ, ಮದುವೆ, ಶುಭ ಸಮಾರಂಭಗಳಲ್ಲೂ ಇನ್ನು ಮುಂದೆ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಅತ್ತಿಬೆಲೆ ಪಟಾಕಿ ಅವಘಡದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆ ನಂತರ ಮುಖ್ಯಮಂತ್ರಿಗಳ ಜತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಡೀ ರಾಜ್ಯದಲ್ಲಿ 5 ವರ್ಷಕ್ಕೆ ನೀಡಿರುವ ಪಟಾಕಿ ಮಳಿಗೆ, ದಾಸ್ತಾನು ಪರವಾನಗಿಯನ್ನು ಇನ್ನು ಮುಂದೆ ಒಂದು ವರ್ಷಕ್ಕೆ ಮಾತ್ರ ನೀಡಲಾಗುವುದು. ಈ ಹಿಂದಿನ ಕಾನೂನುಗಳನ್ನು ಮೀರಿ ಅಧಿಕಾರಿಗಳು ಪರವಾನಗಿ ನೀಡಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಲಾಗುವುದು, ಪರಿಶೀಲನೆ ಮಾಡದ ಉನ್ನತ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು” ಎಂದರು.
ಸರ್ಕಾರದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆಯೇ ಎನ್ನುವ ಪ್ರಶ್ನೆಗೆ “ಮುಖ್ಯಮಂತ್ರಿಗಳ ಸಭೆಯೇ ಜಾಗೃತಿ ಮೂಡಿಸುವ ದೊಡ್ಡ ಸಂದೇಶ. ಇತರೇ ಪಟಾಕಿಗಳಿಂದ ಅವಘಡಗಳೆ ಹೆಚ್ಚು, ಅಲ್ಲದೇ ಪರಿಸರಕ್ಕೂ ಹಾನಿ, ಸಾರ್ವಜನಿಕರಿಗೂ ತೊಂದರೆ, ಆದ ಕಾರಣ ಹಸಿರು ಪಟಾಕಿ ಬಳಕೆಗೆ ತೀರ್ಮಾನ ಮಾಡಲಾಗಿದೆ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ