ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಕೇವಲ ಕ್ಷೇತ್ರದಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ವಿಧಾನಸಭೆಯಲ್ಲಿ ಕ್ರಿಯಾಶೀಲರಾಗಿರುವ ಕೆಲವೇ ಶಾಸಕರಲ್ಲಿ ಲಕ್ಷ್ಮೀ ಹೆಬ್ಬಾಳಕರ ಒಬ್ಬರು. ಇಂಥವರು ವಿಧಾನಸಭೆಯಲ್ಲಿ ಇರಬೇಕು” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ತಾಲೂಕಿನ ಪಂತಬಾಳೇಕುಂದ್ರಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬುಧವಾರ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಜನಪರವಾದ, ಬಡವರ ಬಗ್ಗೆ ಕಾಳಜಿ ಇರುವವರು, ಜನಸೇವೆ ಮಾಡುವ ಇಚ್ಛೆ ಇರುವವರು ರಾಜಕಾರಣದಲ್ಲಿ ಇರಬೇಕು. ಹಾಗಾಗಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಆಯ್ಕೆ ಮಾಡಿ ಜನ ಒಳ್ಳೆಯ ತೀರ್ಮಾನ ಮಾಡಿದ್ದಾರೆ. 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಲಕ್ಷ್ಮೀ ಹೆಬ್ಬಾಳಕರ ಶಾಸಕಿಯಾಗಿ ಗೆದ್ದುಬರುವುದು ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ” ಎಂದರು
“ಕಳೆದ ಬಾರಿ 52 ಸಾವಿರ ಮತಗಳಿಂದ ಲಕ್ಷ್ಮೀ ಹೆಬ್ಬಾಳಕರ ಗೆದ್ದಿದ್ದಾರೆ. ಈ ಬಾರಿ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬೇಕು. ಸಂಜಯ ಪಾಟೀಲಗೆ ಟಿಕೇಟ್ ಸಿಕ್ಕರೆ ಅವರ ಠೇವಣಿ ಜಪ್ತಿಯಾಗಬೇಕು” ಎಂದು ಸಿದ್ದರಾಮಯ್ಯ ಹೇಳಿದರು.
“2018ರಲ್ಲಿ 600 ಭರವಸೆಗಳನ್ನು ನೀಡಿದ ಬಿಜೆಪಿಯವರು ಅದರಲ್ಲಿ ಈಡೇರಿಸಿದ್ದು ಕೇವಲ 50 ಭರವಸೆಗಳು ಮಾತ್ರ. ಇನ್ನೂ 550 ಭರವಸೆಗಳನ್ನು ಈಡೇರಿಸದ ಬಿಜೆಪಿ ಸರಕಾರದಿಂದ ಆಡಳಿತ ಮಾಡಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
“ಸಂಜಯ ಪಾಟೀಲ ಯಾರೆಂಬುದನ್ನು ನಾನು ನೋಡೇ ಇಲ್ಲ” ಎಂದ ಸಿದ್ದರಾಮಯ್ಯ, “ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆಗೆ 50 ಲಕ್ಷ ಕೇಳಿದ್ದು ಸಿದ್ದರಾಮಯ್ಯ ಕೊಡಲೇ ಇಲ್ಲ ಎಂದು ಸಂಜಯ ಪಾಟೀಲ ಹಸಿ ಸುಳ್ಳು ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ನನ್ನ ಬಳಿ ಅವರು ಅನುದಾನ ಕೇಳೇ ಇಲ್ಲ. ಕೇಳಿದ್ದರೆ 10 ಕೋಟಿ ಕೊಡುತ್ತಿದ್ದೆ. ಛತ್ರಪತಿ ಶಿವಾಜಿ ಮಹಾರಾಜದ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದರು.
“ರೈತರಿಂದ ಸುಲಿಗೆ ಮಾಡಿದ್ದ ಹಣದಿಂದಲೇ 6 ಸಾವಿರ ರೂ. ಕೊಡುತ್ತಿದ್ದಾರೆ” ಎಂದು ಕೇಂದ್ರ ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, “ಬಿಜೆಪಿ ಸರಕಾರ 10 ಲಕ್ಷ ಕೋಟಿ ರೂ. ಶ್ರೀಮಂತರ ಸಾಲ ಮನ್ನಾ ಮಾಡುತ್ತದೆ. ಆದರೆ, ಬಡವ, ನೇಕಾರ, ಸಾಮಾನ್ಯ ಜನರ ಸಾಲ ಮನ್ನಾ ಮಾಡುತ್ತಿಲ್ಲ. ಜನಸಾಮಾನ್ಯರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ” ಎಂದು ವಾಗ್ದಾಳಿ ನಡೆಸಿದರು.
“ನರೇಂದ್ರ ಮೋದಿ ಅವರು ಪ್ರಸ್ತುತ ಉದ್ಘಾಟನೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಅವಧಿಯಲ್ಲಿ ರೂಪಿಸಲಾಗಿತ್ತು. ಅವುಗಳನ್ನು ಮೋದಿ ಮಾಡಿದ್ದಾರೆಂದು ಬಿಂಬಿಸಲಾಗುತ್ತಿದೆ. ರಾಜ್ಯದಲ್ಲಿ ಚುನಾವಣೆ ಮಾಡುವುದಕ್ಕೆ ಮೋದಿ ಅವರು ಬರಬೇಕಾಗಿದೆ” ಎಂದರು.
“ಸರ್ಕಾರದ 25 ಕೋಟಿ ರೂ. ಖರ್ಚು ಮಾಡಿ, ಮೊನ್ನೆ ಬಿಜೆಪಿ ಕಾರ್ಯಕ್ರಮ ಮಾಡಿದ್ದಾರೆ. ಮೋದಿ ಅವರ ಕಾರ್ಯಕ್ರಮಕ್ಕೆ ಜನರನ್ನು ಕರೆತರುವುದಕ್ಕೆ ಪಿಡಿಒಗಳಿಗೆ ಜವಾಬ್ದಾರಿ ವಹಿಸಲಾಗಿತ್ತು” ಎಂದು ಅವರು ಆರೋಪಿಸಿದರು.
“ಎಲ್ಲ ವಸ್ತುಗಳ ಖರೀದಿಗೆ ಜಿಎಸ್ ಟಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಯೋಜನೆಗಳನ್ನು ಸ್ಥಗಿತ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಬಗ್ಗೆ ಜನರಿಗೆ ನಂಬಿಕೆ ಇಲ್ಲವಾಗಿದೆ. ಕಾಂಗ್ರೆಸ್ ಜಿಲ್ಲೆಯಲ್ಲಿ 12 ಸ್ಥಾನಗಳನ್ನು ಗೆಲ್ಲುತ್ತದೆ” ಎಂದು ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ಚುನಾವಣೆ ಸಂದರ್ಭದಲ್ಲಿ ಹೊರಗಿನವರು ನಮ್ಮ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಭ್ರಷ್ಟಾಚಾರ ನಡೆದಿದೆ, ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ರಮೇಶ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾಷಣದ ವೇಳೆ ಪೋಡಿಯಂ ತಟ್ಟಿ ಮಾತನಾಡಿದ ಚನ್ನರಾಜ, “ಬೆಳಗಾವಿ ಗ್ರಾಮೀಣದಲ್ಲಿ ಅಭಿವೃದ್ಧಿ ಆಗಿಲ್ಲವೇ ? ಎಂದು ಜನರನ್ನೇ ಪ್ರಶ್ನಿಸಿದರು. ಜನರು ಆಗಿದೆ,ಆಗಿದೆ ಎಂದು ಕೂಗಿದರು. “ಅಭಿವೃದ್ಧಿ ಆಗಿಲ್ಲ ಎನ್ನುವವರಿಗೆ ಬಹುಶಃ ಕಣ್ಣು ಕಾಣಿಸುತ್ತಿಲ್ಲ. ಹೋಗಿ ಕಣ್ಣು ತಪಾಸಣೆ ಮಾಡಿಸಿಕೊಳ್ಳಿ. ನನ್ನ ಜತೆ ಬನ್ನಿ. ನಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ತೋರಿಸುತ್ತೇವೆ. ನಮ್ಮ ಬಗ್ಗೆ ವೈಯಕ್ತಿಕವಾಗಿ ಅಪಪ್ರಚಾರ ಮಾಡುತ್ತಿದ್ದೀರಿ. ನೀವು 100ಕೋಟಿ ರೂ.ಗೆ ಮಾರಾಟವಾಗಿ ನೀವು ನಮಗೆ ಭ್ರಷ್ಟಾಚಾರ ಮಾತನಾಡುತ್ತಿದ್ದೀರಾ? ನಮ್ಮ ಕ್ಷೇತ್ರದಲ್ಲಿ ನಿಮ್ಮ ಗೂಂಡಾಗಿರಿ, ದಾದಾಗಿರಿ ನಡೆಯುವುದಿಲ್ಲ.ನಿಮ್ಮ ಗೂಂಡಾಗಿರಿ ಗೋಕಾಕನಲ್ಲಿ ಇಟ್ಟುಕೊಳ್ಳಿ” ಎಂದು ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದರು. “ಈ ಬಾರಿ ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾಗಿ ಆಯ್ಕೆಯಾಗುತ್ತಾರೆ” ಎಂದರು.
ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಜಮೀರ್ ಅಹಮ್ಮದ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮಾಜಿ ಶಾಸಕ ಅಶೋಕ ಪಟ್ಟಣ, ಎನ್.ಎಚ್.ಕೋನರೆಡ್ಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಇನ್ನಿತರರು ವೇದಿಕೆಯಲ್ಲಿದ್ದರು.
ಇದಕ್ಕೂ ಮುನ್ನ ಶಿಂದೊಳ್ಳಿಯಿಂದ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸಿದ್ದರಾಮಯ್ಯ ಲಕ್ಷ್ಮೀ ಹೆಬ್ಬಾಳಕರ ಮತ್ತಿತರ ಗಣ್ಯರನ್ನು ಪಂತಬಾಳೇಕುಂದ್ರಿಯ ವೇದಿಕೆಗೆ ಕರೆತಂದರು.
ಅದ್ಧೂರಿಯಾಗಿ ನಡೆದ ಪ್ರಜಾಧ್ವನಿ ಯಾತ್ರೆ ರೋಡ್ ಶೋ
https://pragati.taskdun.com/prajadhwani-yatra-road-show-held-in-a-grand-manner/
*ಬೆಳಗಾವಿ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ*
https://pragati.taskdun.com/siddaramaiahpm-narendra-modibelagavi/
*ಸರ್ಕಾರಿ ನೌಕರರ ಸಂಘದ ನಡುವೆಯೇ ಬಣ ಬಡಿದಾಟ; ಷಡಕ್ಷರಿ ವಿರುದ್ಧ ಗುರುಸ್ವಾಮಿ ವಾಗ್ದಾಳಿ*
https://pragati.taskdun.com/7th-pay-commissiongovt-employeesc-s-shadakshariguruswamy/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ