ಪ್ರಗತಿವಾಹಿನಿ ಸುದ್ದಿ, ಹಾವೇರಿ (ರಾಣಿಬೆನ್ನೂರು) – ಮುಂದಿನ 14 ತಿಂಗಳು ಕಾಲ ಕೇವಲ ಜನರ ರಾಜಕಾರಣ ಮಾಡುತ್ತೇನೆ. ಹೊರತು ಯಾವುದೇ ರೀತಿಯ ಅಧಿಕಾರದ ರಾಜಕಾರಣವನ್ನು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇರುವಷ್ಟು ಸಮಯದಲ್ಲಿ ಅತೀ ಹೆಚ್ಚು ಜನರ ಸೇವೆಯನ್ನು ಮಾಡಿ, ಜನರ ಪ್ರೀತಿ ವಿಶ್ವಾಸಗಳಿಸಿ ಮೊತ್ತೊಮ್ಮೆ 2023ರಲ್ಲಿ ನಾವು ಮಾಡಿರುವ ಕೆಲಸಗಳನ್ನು ಮುಂದಿಟ್ಟು ಜನರ ಆರ್ಶೀವಾದ ಕೇಳುತ್ತೇವೆ ಎಂದು ತಿಳಿಸಿದರು.
ಇಂದು ಅವರು ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರದ ವತಿಯಿಂದ ೧ ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆ ಮಾಡಿದ ನಂತರ ಮಾತನಾಡಿದರು.
ಜನವರಿಯಲ್ಲಿ ಬೇರೆ-ಬೇರೆ ಇಲಾಖೆಗಳನ್ನು ಒಂದುಗೂಡಿಸಿ, ಉದ್ಯೋಗ ಕ್ರಾಂತಿಯನ್ನು ಮಾಡುವ ಒಂದು ಮಹತ್ವಾಕಾಂಕ್ಷಿಯ ಯೋಜನೆಯನ್ನು ಸರ್ಕಾರ ರೂಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅಭಿವೃದ್ಧಿ ಎನ್ನುವುದು ಒಂದು ನಿರಂತರ ಚಲನೆಯಲ್ಲಿರುವ ಒಂದು ಪ್ರಗತಿಯ ಚಕ್ರ, ನಿರಂತರ ಅಭಿವೃದ್ಧಿಯನ್ನು ಕಂಡಾಗ ಮಾತ್ರ ಜನರ ಜೀವನದ ಗುಣಮಟ್ಟದಲ್ಲಿ ಬದಲಾವಣೆಯಾಗಲು ಮತ್ತು ಎಲ್ಲ ರಂಗದಲ್ಲಿಯೂ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ. ಗ್ರಾಮೀಣ-ನಗರ ಪ್ರದೇಶ, ರೈತರ ಬದುಕಿನಲ್ಲಿ, ಕೂಲಿ ಕಾರ್ಮಿಕರ, ತಾಯಂದಿರ ಬದುಕಿನಲ್ಲಿ, ಯುವಕರ ಬದುಕಿನಲ್ಲಿ, ದೀನ-ದಲಿತರ, ಹಿಂದುಳಿದ ವರ್ಗದವರ ಸ್ವಾಭಿಮಾನದ ಬದುಕನ್ನು ನೀಡುವ ಕೆಲಸವಾಗಬೇಕಾಗಿದೆ, ಇವೆಲ್ಲವು ಸಾಧ್ಯವಾದಾಗ ಪ್ರಗತಿ-ಪರ, ಕಲ್ಯಾಣ ಪರ ರಾಜ್ಯವಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಆದ್ಯತೆಗಳನ್ನು ಕೊಟ್ಟು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಣಿಬೆನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು ಇದ್ದಂತೆ, ಈ ಭಾಗದ ಅಭಿವೃದ್ಧಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಸಂಕೇತವಾಗುತ್ತದೆ. ಈ ನಿಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ನಾವು ಹೇಳಿರುವ ಕೆಲಸಗಳನ್ನು ದಿಟ್ಟ ನಿರ್ಧಾರಗಳಿಂದ ಮಾಡುತ್ತಾ ಇದ್ದು, ವಿಶೇಷವಾಗಿ ರಾಣೆಬೆನ್ನೂರು ಭಾಗದ ಕೆಲವು ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳನ್ನು ಮಾಡಿದ್ದೇವೆ. ಮೆಡ್ಲೇರಿ ಮತ್ತು ಹೊಳೆಹಾನೇರಿ ಗ್ರಾಮದ ಕೆರೆಗಳಿಗೆ 206 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಕಾಮಗಾರಿಗೆ ಅನುಮೋದನೆ ನೀಡಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ಮೊನ್ನೆ ಬೆಳಗಾವಿ ಸುವರ್ಣಸೌಧ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಲ್‍ಜೀವನ ಮಿಷನ್ ಯೋಜನೆಯಡಿ ಜಿಲ್ಲೆಯ ಬ್ಯಾಡಗಿ, ರಾಣೀಬೆನ್ನೂರು, ಹಿರೇಕೆರೂರು, ಶಿಗ್ಗಾಂವ್, ಸವಣೂರು, ಹಾನಗಲ್ ಹಾಗೂ ಹಾವೇರಿ ಭಾಗದ 336 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಒಟ್ಟು 754.50 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಬಹು ದೊಡ್ಡ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದರು.
ಉತ್ತರ ಕರ್ನಾಟಕ ಪ್ರಾರಂಭವಾಗುವ ಈ ರಾಣಿಬೆನ್ನೂರು ತಾಲ್ಲೂಕಿನ ಶಾಸಕ ಅರುಣ್ ಕುಮಾರ್ ಅವರ ಗ್ರಾಮದಲ್ಲಿ 3 ಕೋಟಿ ರೂ.ಗಳ ವೆಚ್ಚದಲ್ಲಿ ಹೆಬ್ಬಾಗಿಲನ್ನು ನಿರ್ಮಾಣ ಮಾಡಲು ಅನುಮತಿಯನ್ನು ಈಗಾಗಲೇ ನೀಡಲಾಗಿದೆ ಎಂದರು. ಮುಂದಿನ ಡಿಸೆಂಬರ್‍ನಲ್ಲಿ ಅದರ ಉದ್ಘಾಟನೆಯನ್ನು ಮಾಡುವುದಾಗಿ ತಿಳಿಸಿದರು.
ಅದೇ ರೀತಿಯ ರಾಜ್ಯದಲ್ಲಿ ವಿಶೇಷವಾಗಿ ಮಹಿಳೆಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಅವರ ಕುಟುಂಬ ಆರ್ಥಿಕ ಸ್ಥಿತಿ, ರಾಜ್ಯದ ತಲಾವಾರು ಆದಾಯದಲ್ಲಿ, ಜಿಡಿಪಿ ಹೆಚ್ಚಾಗುತ್ತದೆ ಮತ್ತು ಸುಖಿ ಕುಟುಂಬ ಅವರದ್ದಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಮಹಿಳೆಯರಿಗೆ ಬಜೆಟ್‍ನಲ್ಲಿ ವಿಶೇಷ ಕಾರ್ಯಕ್ರಮವನ್ನು ರೂಪಿಸುವುದಾಗಿ ತಿಳಿಸಿದರು.
*ರೈತ ವಿದ್ಯಾನಿಧಿ*
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳಾಗಿದೆ, ಅಧಿಕಾರ ಪಡೆದ 2 ಗಂಟೆಯಲ್ಲಿಯೇ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿಯನ್ನು ಜಾರಿಗೆ ತರಲಾಯಿತು, ಇತಿಹಾಸದಲ್ಲಿಯೇ ಈ ಯೋಜನೆ ಬೇರೆಯಾವ ರಾಜ್ಯಯಲ್ಲಿಯೂ ಇರಲಿಲ್ಲ, ಅಂತಹ ಒಂದು ನಿರ್ಣಯವನ್ನು ಕೈಗೊಂಡಿದ್ದೇನೆ. 2.4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದ್ದು, ಪದವಿ ಶಿಕ್ಷಣಕ್ಕೆ ಈಗ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುತ್ತಿದ್ದಂತೆ ಅರ್ಹರಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು ಇದರಿಂದ 5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಹೈಸ್ಕೂಲ್ ಬರುವುದಕ್ಕೆ ಹಾಗೂ ಹೈಸ್ಕೂಲ್ ನಿಂದ ಪಿಯುಸಿ ಮಾಡುವ ಸಂಖ್ಯೆ ಕಡಿಮೆಯಾಗುತ್ತಿದೆಂಬ ಮಾಹಿತಿಯಿಂದ ಇದಕ್ಕೆ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ರೈತರ ವಿದ್ಯಾನಿಧಿಯನ್ನು 8ನೇ ಮತ್ತು 9ನೇ ತರಗತಿಗೆ ವಿಸ್ತರಣೆ ಮಾಡುಬೇಕೆನ್ನುವ ಬಗ್ಗೆ ತೀರ್ಮಾನ ಮಾಡಿದ್ದೇನೆ ಈ ಬಗ್ಗೆ ಕೂಡಲೇ ಆದೇಶ ಮಾಡುವುದಾಗಿ ಘೋಷಿಸಿದರು. ಇದೊಂದು ಕ್ರಾಂತಿ ಕಾರಿ ಬೆಳವಣೆಗೆ ಆಗಲಿದೆ ಎಂದು ನಾನು ಆಶಿಸಿದ್ದೇನೆ ಎಂದರು.
*ನೇಕಾರರಿಗೆ ನೆರವು*
ರಾಜ್ಯದ ನೇಕಾರರಿಗೆ ಸರ್ಕಾರ ಮಾತ್ರವಲ್ಲದೇ ಫ್ಲೀಪ್ ಕಾರ್ಟ ಅಮೆಜಾನ್‍ಗಳಂತಹ ಖಾಸಗಿ ಸಂಸ್ಥೆಗಳು ಮುಂದೆ ಬಂದಿದ್ದು ಮಾರುಕಟ್ಟೆಗಳು ಅವರ ಮನೆ ಬಾಗಿಲಿಗೆ ಬರುವಂತ ಕೆಲಸಗಳನ್ನು ಸರ್ಕಾರ ಮಾಡಲಿದೆ, ನೇಕಾರರು ನೆಯ್ದಿರುವ ಸೀರೆ , ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಸರ್ಕಾರ ಮಧ್ಯಸ್ಥಿಕೆ ವಹಿಸಿ ಅವರಿಗೆ ಹೆಚ್ಚಿನ ಮಾರುಕಟ್ಟೆ ಹಾಗೂ ಹೆಚ್ಚಿನ ಬೆಲೆ ಸೀಗುವ ರೀತಿಯಲ್ಲಿ ವಿನೂತನ ಕಾರ್ಯಕ್ರಮವನ್ನು ನಾವು ರೂಪಿಸುತ್ತೇವೆ.
ನಮ್ಮ ಸರ್ಕಾರ ಒಟ್ಟಾರೆ ಮುಂದಿನ ದಿನಗಳಲ್ಲಿ ಹಲವಾರು ಸ್ಥಾಪಿತವಾಗಿರುವ ವಿಚಾರಗಳನ್ನು ಬದಲಾವಣೆಗಳನ್ನು ಮಾಡಿ ಒಂದು ಹೊಸ ದಿಕ್ಕುಸೂಚಿ, ಹೊಸ ಕಾರ್ಯಕ್ರಮ, ಹೊಸ ಚೈತನ್ಯವನ್ನು ಈ ನಾಡಿಗೆ ನೀಡುವ ಕೆಲಸ ಆಗುತ್ತಿದೆ ಎಂದರು.
ಕೋವಿಡ್ ನಿಂದ ಆರ್ಥಿಕವಾಗಿ ನಮ್ಮ ರಾಜ್ಯ ಬಹಳ ಕಷ್ಟದಲ್ಲಿದೆ ಇದರಿಂದ ಹೊರಗೆ ಬರುವ ನಿಟ್ಟಿನಲ್ಲಿ ಚಿಂತನೆಗಳು ನಡೆದಿದೆ.
*ರೈತರ ಸಂಕಷ್ಟಕ್ಕೆ ಸ್ಪಂದನೆ*
ರಾಜ್ಯದಲ್ಲಿ ಅಕಾಲಿಕ ಮಳೆಯ ಸಂದರ್ಭದಲ್ಲಿ ಸರ್ಕಾರವು ಹಿಂದೆ ಬಿಳದೇ ರೈತರ ಕಷ್ಟಗಳಿಗೆ ಸ್ಪಂದನೆ ಮಾಡಿ, ಮೊನ್ನೆ ಬೆಳಗಾವಿಯ ಅಧಿವೇಶನದಲ್ಲಿ ದಿಟ್ಟ ನಿರ್ಧಾರದಂತೆ, ಕೇಂದ್ರದ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಒಣಭೂಮಿ ಬೇಸಾಯದ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ 6,800/- ರೂ. ಪರಿಹಾರಕ್ಕೆ ಇದಕ್ಕೆ ರಾಜ್ಯ ಸರ್ಕಾರವು ಇನ್ನೂ 6,800 ರೂ. ಸೇರಿಸಿ, 13,600 ರೂ. ಪರಿಹಾರ. ನೀರಾವರಿ ಜಮೀನಿನಲ್ಲಿ ಬೆಳೆಹಾನಿಗೆ ಪ್ರತಿ ಹೆಕ್ಟೇರ್‍ಗೆ 13,500 ರೂ.ಗಳನ್ನು ಹೆಚ್ಚುವರಿಯಾಗಿ 11,500 ರೂ. ನೀಡಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಹೆಕ್ಟೇರ್‍ಗೆ 25,000 ರೂ ದೊರೆಯಲಿದೆ. ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್‍ಗೆ 18,000 ರೂ. ಪರಿಹಾರಕ್ಕೆ 10,000 ರೂ. ಸೇರಿಸಿ, ಒಟ್ಟು 28,000 ರೂ. ಪರಿಹಾರ ನೀಡುವ ತೀರ್ಮಾನ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 1,200 ಕೋಟಿ ರೂ. ಹೊರೆಯಾಗಲಿದೆ ಎಂದರು. ಬೆಳೆದು ನಿಂತಿರುವ ಬೆಳೆಗಳಿಗೆ, ರಾಗಿ ಭತ್ತ, ಜೋಳ, ಬೆಳೆಕಾಳುಗಳಿಗೆ ಹಾನಿಯಾದ ಸಂದರ್ಭದಲ್ಲಿ ರೈತರೊಂದಿಗೆ ನಾವಿದ್ದೇವೆ ಎಂಬ ಭರವಸೆಯೊಂದಿಗೆ ಅವರಿಗೆ ಹೆಚ್ಚಿನ ಪರಿಹಾರ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.
*ವಸತಿ ಯೋಜನೆ*
5 ಲಕ್ಷ ಮನೆಗಳ ಮಂಜೂರಾತಿ ಮಾಡಿ ಆದೇಶವನ್ನು ಹೊರಡಿಸಲಾಗಿದ್ದು, ಇದರಲ್ಲಿ 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ 1 ಒಂದು ಲಕ್ಷ ನಗರ ಪ್ರದೇಶದಲ್ಲಿ ನಿರ್ಮಾಣ ಮಾಡಲು ಕ್ರಮಕೈಗೊಳ್ಳುವ ಮೂಲಕ ನಗರ ಪ್ರದೇಶದಲ್ಲಿಯೂ ಹೆಚ್ಚಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದರು.
ಮುಂದಿನ ಒಂದೂವರೆ ವರ್ಷದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ನಮ್ಮ ರಾಜ್ಯದ ಜನರ ಜೀವನದಲ್ಲಿ ತರುವಂತೆ ದಿನದ 24/7 ಗಂಟೆಗಳ ಕಾಲ ನಾನು ಜನರ ಸೇವೆಯನ್ನು ಮಾಡುತ್ತೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ತಿಳಿದು ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ನಾವು ಕೆಲಸವನ್ನು ಮಾಡುತ್ತಾ ಇದ್ದೇವೆ. ಈಗಾಗಲೇ ಮಂಜೂರಾಗಿ ಮನೆಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಕಟ್ಟುವಂತ ಕೆಲಸವಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಈ ಬಗ್ಗೆ ಪ್ರತಿ ತಿಂಗಳು ಪರಿಶೀಲನೆ ಮಾಡುವಂತ ಕೆಲಸಗಳನ್ನು ಮಾಡುತ್ತೇನೆಂದರು.
ಅಂತೆಯೇ ಕಾರ್ಯಕ್ರಮದಲ್ಲಿ ನೀಡಿರುವ ಗದೆಯನ್ನು ಇಲ್ಲಿನ ಸಿದ್ದೇಶ್ವರ ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಕೊರೋನಾ: 2 ಮಹತ್ವದ ಘೋಷಣೆ ಮಾಡಿ ಪ್ರಧಾನಿ ಮೋದಿ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ