Kannada NewsKarnataka NewsLatest

17 ಸಚಿವರ ಸಮಗ್ರ ವರದಿ ಆಧರಿಸಿ ಮಹತ್ವದ ನಿರ್ಣಯ

ಗ್ರಾಮಸಭೆ ನಿರ್ಧಾರದ ಮೇರೆಗೆ ಗ್ರಾಮಗಳ ಶಾಶ್ವತ ಸ್ಥಳಾಂತರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರಾಜ್ಯದ ಹದಿನೇಳು ಜಿಲ್ಲೆಗಳಲ್ಲಿ ಪ್ರವಾಹದಿಂದ ಆಗಿರುವ ಹಾನಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲ ಸಚಿವರು ವರದಿ ನೀಡಲಿದ್ದು, ಇದನ್ನು ಆಧರಿಸಿ ಸರ್ಕಾರ ಇನ್ನೊಂದೆರಡು ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಗೋಕಾಕ ಪಟ್ಟಣದಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಬಳಿಕ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು.
ನಾಳೆ ಅಥವಾ ನಾಡಿದ್ದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಾವು ಎಲ್ಲ ಸಚಿವರು ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ವರದಿ ನೀಡಲಿದ್ದೇವೆ. ಸಮಗ್ರ ವರದಿ ಆಧರಿಸಿ ಸರ್ಕಾರ ಇನ್ನೆರಡು ದಿನಗಳಲ್ಲಿ ಸಂತ್ರಸ್ತರ ಪುನರ್ವಸತಿಗಾಗಿ ಮಹತ್ವದ ನಿರ್ಣಯ ಕೈಗೊಳ್ಳಲಿದೆ ಎಂದರು.
ಸಂತ್ರಸ್ತರ ಬದುಕು ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ. ಮಣ್ಣಿನಿಂದ ಕಟ್ಟಿದ ಬಹುತೇಕ ಮನೆಗಳು ನಾಶವಾಗಿವೆ. ಸದ್ಯಕ್ಕೆ ಸರ್ಕಾರ ತುರ್ತಾಗಿ ಹತ್ತು ಸಾವಿರ ರೂ. ಪರಿಹಾರ ಹಾಗೂ ಮನೆ ಕಳೆದುಕೊಂಡ ಜನರಿಗೆ ಪರಿಹಾರ ನಿಗದಿಗೊಳಿಸಲಾಗಿತ್ತು. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಆಗಿರುವ ಹಾನಿಯನ್ನು ಗಮನಿಸಲಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಬೆಳೆಹಾನಿ ಸಮೀಕ್ಷೆ ನಡೆಸುವುದು ಸ್ವಲ್ಪಮಟ್ಟಿಗೆ ತಡವಾಗಲಿದೆ. ಬೆಳೆಹಾನಿ ಸೇರಿದಂತೆ ಎಲ್ಲ ಬಗೆಯ ಪರಿಹಾರದ ಕುರಿತು ಹಾಗೂ ಶಾಶ್ವತ ಸ್ಥಳಾಂತರ ಕುರಿತು ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಜನಾಭಿಪ್ರಾಯದ ಮೇರೆಗೆ ಶಾಶ್ವತ ಸ್ಥಳಾಂತರ:

ಶಾಶ್ವತ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮುಳುಗಡೆಯಾಗುವ ಗ್ರಾಮಗಳ ಜನರ ಜತೆ ಚರ್ಚಿಸಿ, ಗ್ರಾಮಸಭೆಯ ನಿರ್ಧಾರದ ಮೇರೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಸ್ಥಳಾಂತರಕ್ಕೆ ಜನರ ಅಭಿಪ್ರಾಯ, ಲಭ್ಯವಿರುವ ಜಮೀನು, ಖರ್ಚುವೆಚ್ಚಗಳ ಬಗ್ಗೆ ಸೂಕ್ತ ವರದಿ ತಯಾರಿಸುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಗೋಕಾಕ ಪಟ್ಟಣದ ವ್ಯಾಪ್ತಿಯಲ್ಲಿ ಕುಸಿದಿರುವ ಮನೆಗಳ ಸಮೀಕ್ಷೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕತೆಯಿಂದ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಶ್ವತ ಸ್ಥಳಾಂತರಕ್ಕೆ ಒತ್ತಾಯ:

ಆಗಾಗ ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳು ಮತ್ತು ಗೋಕಾಕ ಪಟ್ಟಣದ ಕೆಲವು ಪ್ರದೇಶಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂದು ಸ್ಥಳೀಯ ಮುಖಂಡರು ಸಚಿವರನ್ನು ಒತ್ತಾಯಿಸಿದರು.
ಲೋಳಸೂರ ಸೇತುವೆಯಿಂದ ರಸ್ತೆ ಎತ್ತರ ಹೆಚ್ಚಿಸಿದ್ದರಿಂದ ನೀರು ಪಟ್ಟಣಕ್ಕೆ ನುಗ್ಗುತ್ತಿದೆ. ಆದ್ದರಿಂದ ಸೇತುವೆಯ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಸಲಹೆ ನೀಡಿದರು.
ಸಂಪೂರ್ಣ ಮನೆ ಕಳೆದುಕೊಂಡಿರುವವರಿಗೆ 10 ಸಾವಿರ ಬದಲು 25 ಸಾವಿರ ಪರಿಹಾರ ನೀಡಬೇಕು. ಸಣ್ಣಪುಟ್ಟ ವ್ಯಾಪಾರಸ್ಥರಿಗೂ ನಷ್ಟ ಭರಿಸಲು ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ನದಿಪಾತ್ರದಲ್ಲಿ ಅತಿಕ್ರಮಣ ತೆರವುಗೊಳಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಪ್ರವಾಹದಲ್ಲಿ ಜಾನುವಾರುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವುಗಳ ಮಾಲೀಕರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದರು.
ಮನೆಹಾನಿ ಸಮೀಕ್ಷೆ ಶೀಘ್ರವಾಗಿ ಪೂರ್ಣಗೊಳಿಸಿ ಪಟ್ಟಿ ಸಿದ್ಧಪಡಿಸಬೇಕು. ಪಟ್ಟಿ ಬಂದ ತಕ್ಷಣ ಪರಿಹಾರ, ಮನೆ ಬಾಡಿಗೆ ಮತ್ತು ದುರಸ್ತಿಗೆ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಕೂಡಲೇ ಮನೆಗಳ ಹಾನಿಯ ಸಮೀಕ್ಷೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅದೇ ರೀತಿ ಇನ್ನೆರಡು ದಿನಗಳಲ್ಲಿ ಪ್ರವಾಹಬಾಧಿತ ಪ್ರತಿಯೊಂದು ಗ್ರಾಮವನ್ನು ಸ್ವಚ್ಛತೆ ಕೈಗೊಳ್ಳಬೇಕು.
ಗೋಕಾಕ ತಾಲ್ಲೂಕಿನಲ್ಲಿ ಸಂಪೂರ್ಣ ಮುಳುಗಡೆಯಾಗಿರುವ 10 ಹಾಗೂ ಭಾಗಶಃ ಮುಳುಗಡೆಯಾಗಿರುವ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರಂತರ ಭೇಟಿ ನೀಡಿ ಪರಿಶೀಲಿಸಬೇಕು.
ರೇಷನ್ ಕಿಟ್ ಸಿದ್ಧವಾಗಿದ್ದು, ಪರಿಹಾರ ಕೇಂದ್ರದಿಂದ ಮನೆಗೆ ತೆರಳುವ ಪ್ರತಿ ಕುಟುಂಬಕ್ಕೂ ಕಡ್ಡಾಯವಾಗಿ ರೇಷನ್ ಕಿಟ್ ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ‌.ವಿ. ಅವರು, ಗ್ರಾಮಗಳ ಸ್ವಚ್ಛತೆಗೆ ಪ್ರತಿ ಗ್ರಾಮ ಪಂಚಾಯತಿ ಗೆ ತಲಾ ಒಂದು ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಅದೇ ರೀತಿ ತಾಲ್ಲೂಕು ಪಂಚಾಯತಿಗೂ ಹೆಚ್ಚುವರಿ ಹಣ ನೀಡಲಾಗಿದೆ ಎಂದು ವಿವರಿಸಿದರು.
ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಮನೆಗಳಿಗೆ ತೆರಳಲಿರುವ ಸಂತ್ರಸ್ತರಿಗೆ ರೇಷನ್ ಕಿಟ್ ವಿತರಿಸಿದರು. ಹಾನಿಗೊಳಗಾದ ಗೋಕಾಕ ಪಟ್ಟಣದ ಕುಂಬಾರ ನಾಕಾ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button