
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಹದಾಯಿ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಪರಿಸರ ಇಲಾಖೆಯಿಂದ ನಾವು ಈಗಾಗಲೆ ಅನುಮತಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ವೋಚ್ಛ ನ್ಯಾಯಾಲಯ ಗೋವಾ ಅರ್ಜಿ ಸಂಬಂಧ ನೀಡಿರುವ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ನಾವು ಈಗಾಗಲೆ ಪರಿಸರ ಇಲಾಖೆಯ ಅನುಮತಿ ಪಡೆದಿದ್ದೇವೆ. ಇನ್ನು ಜಲ ಆಯೋಗ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆದು ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ತನ್ನ ಪಾಲಿನ 13.42 ಟಿಎಂಸಿ ನೀರು ಬಳಸಲು ಮಹದಾಯಿ ನ್ಯಾಯಾಧಿಕರಣ ನೀಡಿರುವ ತೀರ್ಪು ಮತ್ತು ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಪ್ರಕಟಿಸಿರುವ ಬಜೆಟ್ ವಿರೋಧಿಸಿ ಗೋವಾ ರಾಜ್ಯ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತ್ತು.
ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಸರ್ವೋಚ್ಛ ನ್ಯಾಯಾಲಯ, ಈ ಹಿಂದೆ ನ್ಯಾಯಾಧಿಕರಣ ಹೇಳಿರುವಂತೆಯೇ ಪರಿಸರ ಇಲಾಖೆ, ಕೇಂದ್ರ ಸರಕಾರ ಮತ್ತು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದು ನ್ಯಾಯಾಧಿಕರಣದ ಗಮನಕ್ಕೆ ತಂದು ಕಾಮಗಾರಿ ನಡೆಸುವಂತೆ ಸೂಚಿಸಿದೆ.
ಇದರಿಂದಾಗಿ ಕರ್ನಾಟಕದ ಹಾದಿ ಮತ್ತಷ್ಟು ಸುಗಮವಾದಂತಾಗಿದೆ. ಇದೇ 5ರಂದು ಪ್ರಕಟವಾಗಲಿರುವ ರಾಜ್ಯ ಬಜೆಟ್ ನಲ್ಲಿ ಈ ಯೋಜನೆಗೆ ಎಷ್ಟು ಹಣ ಮೀಸಲಿಡಲಾಗುತ್ತದೆ ಎನ್ನುವುದು ಕೂತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ