ಮಂತ್ರಿಗಳು, ಶಾಸಕರ ಬೂಟ್ ಪಾಲೀಶ್ ಮಾಡಲು ಅನುಮತಿ ಕೊಡಿ : ಬೇಡಿಕೆ ಕೇಳಿ ದಂಗಾದ ಕಾಗೇರಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – “ಡಿಸೆಂಬರ್ 13ರಿಂದ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಳದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಅಧಿಕಾರಿಗಳ ಬೂಟಿ ಪಾಲೀಶ್ ಮಾಡಲು ಅನುಮತಿ ಕೊಡಿ”
ಅಧಿವೇಶನ ಸಿದ್ಧತೆ ಪರಿಶೀಲಿಸಲು ಬಂದಿದ್ದ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೆದುರು ಇಂತದ್ದೊಂದು ಮನವಿ ಹಿಡಿದು ನಿಂತಾಗ ಕಾಗೇರಿ ಅಕ್ಷರಶಃ ದಂಗಾದರು. ಏನು ಉತ್ತರಿಸಬೇಕೆಂದೇ ತೋಚದಾಯಿತು ಅವರಿಗೆ. ಬೂಟ್ ಪಾಲೀಶ್ ಮಾಡಲು ತಮ್ಮ ಅನುಮತಿ ಕೇಳಿದ್ದನ್ನು ಕಂಡು ಅವಾಕ್ಕಾದರು. ಅದರಲ್ಲೂ ಇಂತಹ ಬೇಡಿಕೆ ಮುಂದಿಟ್ಟವರನ್ನು ನೋಡಿದರೆ ಟಿಪ್ ಟಾಪ್ ಆಗಿದ್ದರು.
ಸಾವರಿಸಿಕೊಂಡ ಕಾಗೇರಿ ನಿಧಾನವಾಗಿ ವಿಚಾರಿಸಿದರು. ಬಾಗಲಕೋಟೆಯ ನ್ಯಾಯವಾದಿಯೂ ಆಗಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರಮೇಶ ಬದ್ನೂರ್ ನೇತೃತ್ವದ ನಿಯೋಗ ಅದಾಗಿತ್ತು.
ರಾಮನಗರ, ಯಾದಗಿರಿ, ಚಿಕ್ಕಬಳ್ಳಾಪುರಗಳಿಗೆ ಮೆಡಿಕಲ್ ಕಾಲೇಜು ಸರಕಾರ ಮೆಡಿಕಲ್ ಕಾಲೇಜು ಮಂಜೂರು ಮಾಡಿದಾಗ ಇವರು ಬಾಗಲಕೋಟೆಗೂ ಮೆಡಿಕಲ್ ಕಾಲೇಜು ಕೊಡಿ ಎನ್ನುವ ಬೇಡಿಕೆ ಮುಂದಿಟ್ಟಿದ್ದರು. ಬಾಗಲಕೋಟೆ ಮೆಡಿಕಲ್ ಕಾಲೇಜಿಗೆ ನೀಡಲು ಸರಕಾರದ ಬಳಿ ಅನುದಾನವಿಲ್ಲ ಎನ್ನುವ ಉತ್ತರ ಬಂದಾಗ, ಕೆರಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಸರಕಾರಕ್ಕೆ ಹಣ ಕಳಿಸಲು ಕಳೆದ ನವೆಂಬರ್ 11ರಂದು ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೂಟ್ ಪಾಲೀಶ್ ಮಾಡಿ ಹಣ ಸಂಗ್ರಹಿಸಿದರು.
ಇದು ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಅವರನ್ನು ಕೆರಳಿಸಿತು. ಅವರು ಇಡೀ ಜಿಲ್ಲಾದ್ಯಂತ ಬೂಟ್ ಪಾಲೀಶ್ ಮಾಡಿ ಎಂದು ವ್ಯಂಗ್ಯವಾಡಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರು, ರಾಜ್ಯದ್ಯಂತ ಬೂಟ್ ಪಾಲೀಶ್ ಮಾಡಿ ಹಣ ಸಂಗ್ರಹಿಸಿ ಸರಕಾರಕ್ಕೆ ಕೊಡಲು ನಿರ್ಧರಿಸಿದರು.
ವಿಧಾನಸೌಧದ ಮುಂದೆ ಬೂಟ್ ಪಾಲೀಶ್ ಮಾಡಿದರೆ ಮಂತ್ರಿಗಳು, ಶಾಸಕರು ಹೆಚ್ಚಿನ ದುಡ್ಡು ಬರುತ್ತದೆ. ಬೇಗ ಹೆಚ್ಚು ಹಣ ಸಂಗ್ರಹ ಮಾಡಿ ಕಳಿಸಿದರೆ ಬೇಗ ಮೆಡಿಕಲ್ ಕಾಲೇಜು ಆಗಬಹುದು ಎನ್ನುವ ಉದ್ದೇಶದಿಂದ ವಿಧಾನಸೌಧದ ಮುಂದೆ ಬೂಟ್ ಪಾಲೀಶ್ ಮಾಡಲು ಕಾಗೇರಿ ಅವರ ಬಳಿ ಅನುಮತಿ ಕೇಳಿದೆವು ಎಂದು ರಮೇಶ ಬುದ್ನೂರ್ ಪ್ರಗತಿವಾಹಿನಿಗೆ ತಿಳಿಸಿದರು.
ಅನುಮತಿ ನೀಡುವುದು ನಾನಲ್ಲ, ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಅನುಮತಿ ಕೇಳಿ ಎಂದು ಕಾಗೇರಿ ತಿಳಿಸಿದರು. ನಾಳೆ ಪೊಲೀಸ್ ಆಯುಕ್ತರಿಗೆ ಮನವಿ ಕೊಡುತ್ತೇವೆ ಎಂದು ಅವರು ತಿಳಿಸಿದರು.
SHOCKING NEWS – ಕರ್ನಾಟಕಕ್ಕೆ ಒಮಿಕ್ರಾನ್ ಎಂಟ್ರಿ; ದೇಶದಲ್ಲೇ ಮೊದಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ