
ಪ್ರಗತಿವಾಹಿನಿ ಸುದ್ದಿ: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ.ಆರ್ಕ್ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಎಲ್ಲ ನಾಲ್ಕು ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪಿಜಿ ಸಿಇಟಿ ಅಭ್ಯರ್ಥಿಗಳು ಮೊದಲ ಸುತ್ತಿನಲ್ಲಿ ಸೀಟು ಪಡೆದವರಿಗೆ 4 ಚಾಯ್ಸ್ ದಾಖಲಿಸಲು ಅಕ್ಟೋಬರ್ 13ರ ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಕಾಲೇಜು ಪ್ರವೇಶ ಪಡೆದವರಿಗೂ ಅವಕಾಶ ಕಲ್ಪಿಸಲಾಗಿದೆ.
2ನೇ ಸುತ್ತು ಸೀಟು ಹಂಚಿಕೆ ಮಾಡುವಂತೆ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೆಇಎ ಚಾಯ್ಸ್ ದಾಖಲೆಗೆ ಅವಕಾಶ ನೀಡಿದೆ.
ಈ ಸಂಬಂಧ ಕೆಇಎ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಅ.13ರಂದು ಬೆಳಿಗ್ಗೆ 10 ಗಂಟೆವರೆಗೆ ಚಾಯ್ಸ್ ಹಾಕಬಹುದು. ಈಗಾಗಲೇ ಕಾಲೇಜುಗಳಲ್ಲಿ ಪ್ರವೇಶ ಪಡೆದವರು ಹಾಗೂ ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡವರಿಗೆ ಚಾಯ್ಸ್-2 ದಾಖಲಿಸಿ ಇನ್ನೂ ಉತ್ತಮ ಸೀಟಿಗೆ ಅಪ್ ಗ್ರೇಡ್ ಆಗಲು ಅವಕಾಶ ನೀಡಲಾಗಿದೆ. ಅಲ್ಲದೆ ಅ.13ರಂದು ಮಧ್ಯಾಹ್ನ 2ರಿಂದ ಅ.15ರ ಬೆಳಿಗ್ಗೆ 10ಗಂಟೆವರೆಗೆ ಆಪ್ಷನ್ಸ್ ಅನ್ನು ಮೇಲೆ-ಕೆಳಗೆ (Re-Arrange) ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಚಾಯ್ಸ್-1 ದಾಖಲಿಸಿದರೆ ಕಾಲೇಜಿಗೆ ಪ್ರವೇಶ ಪಡೆಯಬೇಕು. ಚಾಯ್ಸ್-2 ದಾಖಲಿಸಿದರೆ ಇನ್ನೂ ಉತ್ತಮ ಸೀಟಿಗೆ ಅಪ್ ಗ್ರೇಡ್ ಆಗಲು ಅನುವು ಮಾಡುತ್ತದೆ. ಚಾಯ್ಸ್-3 ಹಾಕಿದರೆ ಸಿಕ್ಕಿರುವ ಸೀಟು ಬೇಡ ಎಂದು ಹಾಗೂ ಚಾಯ್ಸ್-4 ಹಾಕಿದರೆ ಯಾವುದೂ ಬೇಡ ಎಂದು ಇಡೀ ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಲು ಅವಕಾಶ ನೀಡುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




