ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕರ್ನಾಟಕ ಕಾನೂನು ಸಂಸ್ಥೆಯ ಐಎಂಇಆರ್ ಕ್ಯಾಂಪಸ್‌ನಲ್ಲಿ ಪಿಜಿಸಿಇಟಿ ಹಾಗೂ ಕೆಮ್ಯಾಟ್ ಪ್ರವೇಶ ಪರೀಕ್ಷೆ ಸಿದ್ಧತೆಯ ಒಂದು ವಾರದ ತರಬೇತಿ ಶಿಬಿರ ಸೋಮವಾರ ಆರಂಭಗೊಂಡಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ರಾಜೇಂದ್ರ ಬೆಳಗಾವಕರ ಮಾತನಾಡಿ, ತರಬೇತಿ ಉದ್ದೇಶ, ಪ್ರಸ್ತುತತೆ ಬಗ್ಗೆ ವಿವರಿಸಿದರು. ಶಿಬಿರಾರ್ಥಿಗಳು ತಮ್ಮ ಗುರಿ ಸಾಧನೆಯತ್ತ ಗಮನ ಕೇಂದ್ರೀಕರಿಸಿ ತರಬೇತಿಯಲ್ಲಿ ಚರ್ಚಿಸಲಾಗುವ ವಿಷಯಗಳನ್ನು ನಿರಂತರವಾಗಿ ಅಭ್ಯಸಿಸಬೇಕು ಎಂದು ಕಿವಿಮಾತು ಹೇಳಿದರು.
ಶಿಬಿರಾರ್ಥಿಗಳನ್ನು ಸ್ವಾಗತಿಸಿ, ಮಾತನಾಡಿದ ಐಎಂಇಆರ್ ನಿರ್ದೇಶಕ ಡಾ. ಅತುಲ ದೇಶಪಾಂಡೆ, ಎಂಬಿಎ ಪದವಿಗೆ ಪ್ರವೇಶ ಪಡೆಯಲು ಪಿಜಿಸಿಇಟಿ ಮತ್ತು ಕೆಮ್ಯಾಟ್ ಪರೀಕ್ಷೆ ಬರೆಯುವುದು ಕಡ್ಡಾಯ. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಬಯಸಿದ ಎಂಬಿಎ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು. ಶಿಬಿರಾರ್ಥಿಗಳು ತರಬೇತಿ ಸಂದರ್ಭದಲ್ಲಿ ಕಾಲೇಜಿನ ಕಲಿಕಾ ಸೌಲಭ್ಯಗಳಾದ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಇಂಟರ್‌ನೆಟ್‌ಗಳನ್ನು ಬಳಸಿಕೊಳ್ಳಬಹುದು. ಇದಲ್ಲದೇ ಹಿರಿಯ ನುರಿತ ಪ್ರಾಧ್ಯಾಪಕರು ಕೂಡ ಮಾರ್ಗದರ್ಶನ ಮಾಡುವರು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಗೆ ಹೆಸರು ನೋಂದಾಯಿಸಿದ್ದಾರೆ.
ಪ್ರೊ. ರಾಹುಲ್ ಮೇಲ್‌ಕಾಂಟ್ರ್ಯಾಕ್ಟರ್ ಪರೀಕ್ಷೆಯ ವಿವಿಧ ವಿಭಾಗಗಳು, ವಿಧಿ-ವಿಧಾನಗಳ ಪರಿಚಯ ಮಾಡಿದರು. ಕಾಲೇಜಿನ ದಾಖಲಾತಿ ಸಮಿತಿ ಸದಸ್ಯರಾದ ಡಾ. ಆರೀಫ್ ಶೇಖ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಪ್ರೊ. ಅಮಿತ ಕುಲಕರ್ಣಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ