ವರ್ಗಾವಣೆಯಾದ ತಂದೆ ಜಾಗದಲ್ಲಿ ಮಗಳ ನಿಯೋಜನೆ; ರಾಜ್ಯ ಪೊಲೀಸ್ ಇಲಾಖೆಯಲ್ಲೊಂದು ಅಪರೂಪದ ಪ್ರಸಂಗ
ಪ್ರಗತಿವಾಹಿನಿ ಸುದ್ದಿ, ಮಂಡ್ಯ: ತಂದೆಯನ್ನು ವರ್ಗಾವಣೆ ಮಾಡಿ ಅದೇ ಜಾಗದಲ್ಲಿ ಪುತ್ರಿಯನ್ನು ನಿಯೋಜಿಸುವ ಮೂಲಕ ರಾಜ್ಯದ ಪೊಲೀಸ್ ಇಲಾಖೆ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿರುವ ಬಿ.ಎಸ್. ವೆಂಕಟೇಶ ಅವರನ್ನು ವರ್ಗಾವಣೆ ಮಾಡಿರುವ ಸರಕಾರ ಅದೇ ಜಾಗದಲ್ಲಿ ಅವರ ಪುತ್ರಿ ಬಿ.ವಿ. ವರ್ಷಾ ಅವರನ್ನು ನಿಯೋಜನೆ ಮಾಡಿದೆ.
ವರ್ಗಾವಣೆಗೊಂಡ ವೆಂಕಟೇಶ ಅವರು ತಮ್ಮ ಪುತ್ರಿ ವರ್ಷಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ತಂದೆ- ಮಗಳು ಖುಷಿಯಿಂದ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ತುಮಕೂರು ಜಿಲ್ಲೆಯ ಹುಲಿಯೂರು ದುರ್ಗದವರಾದ ಬಿ.ಎಸ್. ವೆಂಕಟೇಶ ಅವರು 16 ವರ್ಷ ಭಾರತೀಯ ಸೇನಾಪಡೆಯಲ್ಲಿ ಅಧಿಕಾರಿ ಹುದ್ದೆ ನಿರ್ವಹಿಸಿ ನಿವೃತ್ತಿ ನಂತರ 2010ರ ಬ್ಯಾಚ್ ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆ ಸೇರಿಕೊಂಡಿದ್ದಾರೆ. ಸೈನ್ಯದ ಸೇವಾವಧಿಯಲ್ಲಿ ಕಾರ್ಗಿಲ್ ಕಾರ್ಯಾಚರಣೆಯಲ್ಲೂ ಪಾಲ್ಗೊಂಡಿದ್ದ ಅವರು, ಪಾಕಿಸ್ತಾನ, ಚೀನಾ ಗಡಿಗಳಲ್ಲೂ ಸೇವೆ ಸಲ್ಲಿಸಿದ್ದಾರೆ.
ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಹಲವೆಡೆ ಕರ್ತವ್ಯ ನಿರ್ವಹಿಸಿರುವ ಅವರು ಒಂದುವರೆ ವರ್ಷದಿಂದ ಮಂಡ್ಯ ಸೆಂಟ್ರಲ್ ಠಾಣೆ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರು ವರ್ಗಾವಣೆಗೊಂಡು ಅವರ ಜಾಗಕ್ಕೆ ಅವರ ಪುತ್ರಿಯೇ ಬಂದಿರುವುದು ಅಪರೂಪದ ಘಟನೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ