
ಪ್ರಗತಿವಾಹಿನಿ ಸುದ್ದಿ: ಕಾರ್ಗೋ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ಪಾರ್ಕ್ ಮಾಡಿದ್ದ ವಾಹನಗಳಿಗೆ ಡಿಕ್ಕಿಯಾಗಿದ್ದು, ಈ ಅವಘಡದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿದ ಅಮೆಜಾನ್ ಪ್ರೈಮ್ ಏರ್ ಕಾರ್ಗೋ ಜೆಟ್ ವಿಮಾನ
ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದಟ್ಟವಾದ ಹೊಗೆ ಏಳುವುದು ಸೆರೆಯಾಗಿದೆ.
ಬೋಯಿಂಗ್ 767-300 ವಿಮಾನ ಇದಾಗಿದ್ದು, ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಮಿಯಾಮಿಗೆ ಆಗಮಿಸಿತ್ತು. ವಿಮಾನ ಅಪಘಾತದ ನಂತರ ಎಲ್ಲಾ ರನ್‌ವೇಗಳು ಮತ್ತು ಟ್ಯಾಕ್ಸಿವೇಗಳನ್ನು ಕೆಲಕಾಲ ಮುಚ್ಚಲಾಗಿತ್ತು.
ಕೂಡಲೇ ರಕ್ಷಣಾ ತಂಡಗಳು ವಿಮಾನಕ್ಕೆ ಹೊತ್ತಿದ್ದ ಬೆಂಕಿಯನ್ನು ಆರಿಸಿದ್ದಾರೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಪಘಾತದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಸಹ ಈ ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.




