
ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ನಗರಿ ಉಡುಪಿಗೆ ಆಗಮಿಸಿದ್ದಾರೆ. ಪರ್ಯಾಯ ಪುತ್ತಿಗೆ ಮಠ ಮತ್ತು ಶ್ರೀಕೃಷ್ಣಮಠಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದು, ಭವ್ಯ ಸ್ವಾಗತ ಕೋರಲಾಯಿತು.
ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರು ಏರ್ ಪೋರ್ಟ್ ಗೆ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕವಾಗಿ ಆದಿ ಉಡುಪಿಗೆ ಆಗಮಿಸಿದರು. ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ಆದಿ ಉಡುಪಿಯಿಂದ ರಸ್ತೆ ಮಾರ್ಗವಾಗಿ ಉಡುಪಿಗೆ ತೆರಳಿರುವ ಪ್ರಧಾನಿ ಮೋದಿ, ಉಡುಪಿಯಲ್ಲಿ ಭರ್ಜರಿ ರೋಡ್ ಶೋ ಆರಂಭವಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿರುವ ಜನರು ಮೋದಿ ಮೋದಿ ಎಂದು ಜಯಘೋಷಗಳ ಮೂಲಕ ಹೂಮಳೆಗರೆದು ಸ್ವಾಗತಿಸಿದ್ದಾರೆ. ರೋಡ್ ಶೋ ಮೂಲಕವಾಗಿ ಶ್ರೀಕೃಷ್ಣಮಠಕ್ಕೆ ತೆರಳಲಿದ್ದಾರೆ. ಅಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ಕನಕನ ಕಿಂಡಿ ಮೂಲಕವಾಗಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಬಳಿಕ ಉಡುಪಿಯಲ್ಲಿ ವಿವಿಧಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.



