ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕಿನಾ ವಿರುದ್ಧ ಹೋರಾಡಲು ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೇಶದ ಜನರು ತಮ್ಮ ಮನೆಯ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮೇಣದ ಬತ್ತಿ ಅಥವ ದೀಪ, ಅಥವಾ ಮೊಬೈಲ್ ಲೈಟ್, ಹಣತೆ ಉರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ಇದೀಗ ದೇಶಾದ್ಯಂತ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಪವರ್ ಗ್ರಿಡ್ ಹಾಳಾಗುವ ಆತಂಕ ಎದುರಾಗಿದೆ.
ಹೌದು. ಪ್ರಧಾನಿ ಕರೆಯಂತೆ ದೇಶಾದ್ಯಂತ ಒಮ್ಮೆಲೇ ಲೈಟ್ ಆಫ್ ಮಾಡಿದರೆ ವಿದ್ಯುತ್ ಪೂರೈಸುವ ಪವರ್ ಗ್ರಿಡ್ ಟ್ರಿಪ್ ಆಗುವ ಸಾಧ್ಯತೆ ಇದೆ. ಎಲ್ಲರೂ ಪವರ್ ಆಫ್ ಮಾಡಿದಾಗ ವಿದ್ಯುತ್ ಪೂರೈಕೆ ಸ್ತಬ್ಧಗೊಂಡು ಪವರ್ ಗ್ರಿಡ್ನಲ್ಲಿ ಹೈವೋಲ್ಟೇಜ್ ಸೃಷ್ಟಿಯಾಗಿ ಟ್ರಿಪ್ ಆಗುವ ಸಾಧ್ಯತೆ ಇದೆ. ಹಾಗಾದಲ್ಲಿ ಇಡೀ ದೇಶ10-16 ಗಂಟೆಗಳ ಕಾಲ ಕತ್ತಲಲ್ಲೇ ಕಳೆಯಬೇಕಾಗುತ್ತದೆ.
ಈ ಹಿನ್ನಲೆಯಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್) ಅಸೋಸಿಯೇಟ್ ಡೈರೆಕ್ಟರ್ ಎಂ.ಕೆ ಮಾಥುರ್ ದೇಶದ ಜನತೆಯಲ್ಲಿ ಕರೆಂಟ್ ತೆಗೆದ ಸಂದರ್ಭದಲ್ಲಿ 15 ನಿಮಿಷಗಳ ಕಾಲ ಫ್ಯಾನ್ ಆನ್ ಮಾಡುವಂತೆ ಸಂದೇಶ ರವಾನಿಸಿದ್ದಾರೆ.
ಇನ್ನೊಂದೆಡೆ ಮಹಾರಾಷ್ಟ್ರದ ಇಂಧನ ಸಚಿವ ನಿತಿನ್ ರಾವತ್, ಪ್ರಧಾನಿ ನರೇಂದ್ರ ಮೋದಿಯವರೇ ದಯವಿಟ್ಟು ಕರೆಂಟ್ ಆಫ್ ಮಾಡುವುದಕ್ಕೆ ಸೂಚಿಸಬೇಡಿ. ಒಂದು ವೇಳೆ ಪವರ್ ಗ್ರಿಡ್ ಟ್ರಿಪ್ ಆದರೆ, ಮತ್ತೆ ಅದನ್ನು ರಿಸ್ಟೋರ್ ಮಾಡಲು 16 ಗಂಟೆ ಬೇಕಾಗುತ್ತದೆ. ಹಾಗಾಗಿ ಕೇವಲ ದೀಪ ಹಚ್ಚಲು ತಿಳಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ತಮಿಳುನಾಡಿನಲ್ಲಿ ಪವರ್ ಕಾರ್ಪೊರೇಷನ್ ಲಿಮಿಟೆಡ್ಗಳು ತಮ್ಮ ಸಿಬ್ಬಂದಿಗೆ ಅಲರ್ಟ್ ಆಗಿರುವಂತೆ ಸೂಚಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ