Latest

ರೈತರ ಸ್ವಾತಂತ್ರ್ಯವನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ – ಮೋದಿ ಟಾಂಗ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರೈತರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಕೃಷಿ ಮಸೂದೆಯಿಂದ ಅನ್ನದಾತನಿಗೆ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ರೈತರ ಸ್ವಾತಂತ್ರ್ಯವನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮಾಮಿ ಗಂಗೆ ಯೋಜನೆಯಡಿ ಉತ್ತರಾಖಂಡ್ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನಿಡಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರಕಾರ ರೈತರ ಹಕ್ಕುನ್ನು ಅವರಿಗೆ ನೀಡುತ್ತಿದೆ. ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಅವರು ಬಯಸುವುದಿಲ್ಲ, ಮಧ್ಯವರ್ತಿಗಳು ಲಾಭ ಗಳಿಸಬೇಕೆಂದು ಅವರ ಉದ್ದೇಶವಾಗಿದೆ. ಹೀಗಾಗಿ ರೈತರ ಸ್ವಾತಂತ್ರ್ಯವನ್ನು ಅವರು ಕಿತುಕೊಳ್ಳಲು ಹೊರಟಿದ್ದಾರೆ ಎಂದರು.

ರೈತರು ಪೂಜಿಸುವ ಕೃಷಿ ಯಂತ್ರೋಪಕರಣಗಳಿಗೆ ಬೆಂಕಿ ಹಚ್ಚುವ ಮೂಲಕ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳುವ ಮೂಲಕ ನಿನ್ನೆ ಇಂಡಿಯಾ ಗೇಟ್ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರು ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದ್ದನ್ನು ಖಂಡಿಸಿದರು.

ನೂತನ ಕೃಷಿ ಮಸೂದೆಯಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ರೈತರ ಸ್ವಾತಂತ್ರ್ಯ ಅವರಿಗೆ ನೀಡಲಾದ ಹಕ್ಕನ್ನು ಕೆಲವರು ಪ್ರಶ್ನಿಸುವ ಮೂಲಕ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರೈತರು, ಕಾರ್ಮಿಕರು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಈ ಸುಧಾರಣೆಗಳು ಕಾರ್ಮಿಕರು, ಯುವಕರು, ಮಹಿಳೆಯರು, ರಾಷ್ಟ್ರದ ರೈತರ ಶಕ್ತಿಯನ್ನು ಬಲಪಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button