*ಮೋದಿ ಮಂಗಳಸೂತ್ರ ಹೇಳಿಕೆಗೆ ಡಿಸಿಎಂ ತಿರುಗೇಟು; ಬಂಗಾರದ ಬೆಲೆ ಏರಿಸಿ ಮಹಿಳೆಯರು ಮಂಗಳಸೂತ್ರ ಹಾಕಲಾಗದಂತೆ ಮಾಡಿದ್ದು ಬಿಜೆಪಿ ಎಂದು ಟಾಂಗ್*
ಜನ ಕೊಟ್ಟಿರುವ ಗೌರವವನ್ನು ಮೋದಿಯವರು ಕಾಪಾಡಿಕೊಳ್ಳಬೇಕು; ಡಿಸಿಎಂ ಕಿಡಿ
ಪ್ರಗತಿವಾಹಿನಿ ಸುದ್ದಿ: ಚುನಾವಣೆಯಲ್ಲಿ ಸೋಲಿನ ಅರಿವಾಗಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಸುಳ್ಳಿನ ಟೀಕೆ ಮಾಡುತ್ತಿದ್ದಾರೆ, ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಮಂಗಳಸೂತ್ರದ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ ಹೇಳಿಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮೋದಿ ಅವರು ಪ್ರಧಾನಿ ಆದಾಗ 2,800 ರೂಪಾಯಿ ಇದ್ದ ಒಂದು ಗ್ರಾಂ ಚಿನ್ನ ಈಗ 7,500 ಆಗಿದೆ. ನಮ್ಮ ಮಹಿಳೆಯರು ಮಂಗಳಸೂತ್ರ ಹಾಕಲಾಗದಂತೆ ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ದಾರೆ. ಈ ವಿಚಾರವಾಗಿ ನಾನು ನಮ್ಮ ಪಕ್ಷಕ್ಕೆ ಒಂದು ಸಲಹೆ ನೀಡುತ್ತಿದ್ದೇನೆ. ನಮ್ಮ ದೇಶ, ಧರ್ಮ ಕಾಪಾಡಿಕೊಳ್ಳಬೇಕು ಎಂದರು.
ಪ್ರಧಾನಿ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಅವರು ಬೆಂಗಳೂರಿನಲ್ಲಿ ನನ್ನ ತಾಯಿ ದೇಶಕ್ಕಾಗಿ ತನ್ನ ಮಾಂಗಲ್ಯಸೂತ್ರ ತ್ಯಾಗ ಮಾಡಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ. ಇದನ್ನು ಮೋದಿ ಅವರು ಅರಿತುಕೊಳ್ಳಬೇಕು. ಅವರ ಸ್ಥಾನದ ಬಗ್ಗೆ ನಮಗೆ ಗೌರವವಿದೆ. ಜನ ಅವರಿಗೆ ಹತ್ತು ವರ್ಷಗಳ ಕಾಲ ಅವಕಾಶ ಮಾಡಿಕೊಟ್ಟಿದ್ದಾರೆ. ಜನ ಕೊಟ್ಟಿರುವ ಗೌರವವನ್ನು ಮೋದಿಯವರು ಕಾಪಾಡಿಕೊಳ್ಳಬೇಕು. ಈ ರೀತಿ ದೇಶಕ್ಕೆ ಅಪಮಾನ ಮಾಡಬಾರದು ಎಂದು ಟಾಂಗ್ ನೀಡಿದರು.
ಪ್ರಧಾನಮಂತ್ರಿಗಳು ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅವರ ಪಕ್ಷದ ನೆಲೆ ಇಲ್ಲ. ಹೀಗಾಗಿ ಆಂಧ್ರದಲ್ಲಿ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅವರ ಸರ್ಕಾರ ಇಲ್ಲ. ಕರ್ನಾಟಕದಲ್ಲೂ ಅವರು ಎರಡಂಕಿ ಸ್ಥಾನ ಪಡೆಯಲ್ಲ. ಹೀಗಾಗಿ ಹತಾಶೆಯಿಂದ ಮಂಗಳಸೂತ್ರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ