NationalPolitics

*15 ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ: ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು?*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ 15 ರಾಜ್ಯಗಳಿಗೆ ವಿಪತ್ತು ಪರಿಹಾರ ನಿಧಿ ಬಿಡುಗಡೆ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು 15 ರಾಜ್ಯಗಳಿಗೆ ವಿಪತ್ತು ಪರಿಹಾರ ಮತ್ತು ಸಾಮರ್ಥ್ಯ ವೃದ್ಧಿ ಯೋಜನೆಗಳಿಗೆ 1,115 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಒಟ್ಟು 1,115 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ 1,000 ಕೋಟಿ ರೂ. ವಿವಿಧ ವಿಪತ್ತು ಪರಿಹಾರದ ಹಣವಾಗಿದ್ದರೆ, ಇನ್ನುಳಿದ ಹಣ ಸಾಮರ್ಥ್ಯ ವೃದ್ಧಿ ಯೋಜನೆಗೆ ನೀಡಲಾಗಿದೆ.

ಇದರಲ್ಲಿ ಕರ್ನಾಟಕಕ್ಕೆ ಕೇವಲ 72 ಕೋಟಿ ರೂಪಾಯಿ ನೀಡಲಾಗಿದೆ. ಎನ್​ಡಿಎ ಸರ್ಕಾರವಿರುವ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ತಲಾ 139 ಕೋಟಿ ರೂ. ಹಾಗೂ ಮಹಾರಾಷ್ಟ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ವಿರೋಧ ಪಕ್ಷಗಳು ಇರುವ ಕರ್ನಾಟಕ ಮತ್ತು ಕೇರಳಕ್ಕೆ ತಲಾ 72 ಕೋಟಿ ರೂ. ನೀಡಲಾಗಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ತಲಾ 50 ಕೋಟಿ ರೂ. ಹಂಚಿಕೆ ಮಾಡಿದೆ.

ಇನ್ನು 8 ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಕ್ಕೆ 378 ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ.

ಕಳೆದ ತಿಂಗಳು ಕೇಂದ್ರ ಸರಕಾರ 28 ರಾಜ್ಯಗಳಿಗೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಸುಮಾರು 1,78,173 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ದೇಶದಲ್ಲೇ ಎರಡನೇ ಅತಿ ಹೆಚ್ಚಿನ ತೆರಿಗೆ ಸಂಗ್ರಹವಾಗುವ ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ. ಹಂಚಿಕೆ ಮಾಡಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ವಿಪತ್ತು ಪರಿಹಾರ ಹಣ ಬಿಡುಗಡೆಯಲ್ಲಿಯೂ ಕೇವಲ 72 ಕೋಟಿ ಹಣ ನೀಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button