ಪ್ರಗತಿವಾಹಿನಿ ಸುದ್ದಿ; ಧಾರವಾಡ: ಧಾರವಾಡ ಐಐಟಿ ಗ್ರೀನ್ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಜನರ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ, ಕರ್ನಾಟಕದ ಪ್ರತಿ ವ್ಯಕ್ತಿ ಜೀವನ ಸಮೃದ್ಧಗೊಳಿಸುವ ಅವಕಾಶ ಸಿಕ್ಕಿದೆ. ಜಗದ್ಗುರು ಬಸವೇಶ್ವರರಿಗೆ ನನ್ನ ಪ್ರಣಾಮಗಳು. ಧಾರವಡ ಕರ್ನಾಟಕ ಮಾತ್ರವಲ್ಲ ಭಾರತದ ಜೀವಂತ ಪ್ರತಿಬಿಂಬ ಎಂದು ಹೇಳಿದರು.
ಪಂಡಿತ್ ಭೀಮಸೇನ್ ಜೋಶಿ, ದ.ರಾ.ಬೇಂದ್ರೆಯವರನ್ನು ಸ್ಮರಿಸಿದ ಪ್ರಧಾನಿ ಮೋದಿ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೂ ಧಾರವಾಡ ಕೊಡುಗೆ ಸಾಕಷ್ಟಿದೆ. ಬೆಂಗಳೂರು-ಮೈಸೂರು ಹೈವೆ ಉದ್ಘಾಟನೆ ನನ್ನ ಸೌಭಾಗ್ಯ. ಇತ್ತೀಚೆಗೆ ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟಿಸಲಾಗಿದೆ. ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಇಂದು ಧಾರವಾಡದಲ್ಲಿ ಐಐಟಿ ಲೋಕಾರ್ಪಣೆ ಮಾಡಲಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ವೇಗವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.
ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿದೆ 250 ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದೆ. ದೇಶದ ನಗರಗಳಿಗೆ ಆಧುನಿಕ ಸ್ಪರ್ಶ ನೀಡಿ ಅಭಿವೃದ್ಧಿ ಮಾಡಲಾಗಿದೆ. ಸಂಪರ್ಕ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಇಡೀ ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ತಾಯಿ ಇದ್ದಂತೆ ನಮ್ಮ ಭಾರತ ದೇಶ. ಕೆಲ ವರ್ಷಗಳ ಹಿಂದೆ ಲಂಡನ್ ನಲ್ಲಿ ಬಸವಣ್ಣನವರ ಮೂರ್ತಿ ಅನಾವರಣ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಈ ಭೂಮಿ 12ನೇ ಶತಮಾನದಲ್ಲೇ ಸಂಸತ್ ಭವನದ ಪರಿಕಲ್ಪನೆಯನ್ನು ನೀಡಿದೆ. ಅನುಭವ ಮಂಟಪ ಎಲ್ಲ ವರ್ಗದ ಜನರನ್ನು ಒಳಗೊಂಡಿತ್ತು ಎಂದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಪ್ರಧಾನಿ ಮೋದಿ, ಈಗ ಕೆಲವರು ವಿದೇಶದಲ್ಲಿ ನಿಂತು ಭಾರತಕ್ಕೆ ಅವಮಾನ ಮಾಡುತ್ತಿದ್ದಾರೆ. ಬಸವೇಶ್ವರರಿಗೆ ಕೆಲವೊಬ್ಬರು ಅವಮಾನ ಮಾಡುತ್ತಿದ್ದಾರೆ. ಅಂತವರ ಬಗ್ಗೆ ಕರ್ನಾಟಕದ ಜನ ಎಚ್ಚರವಾಗಿರಬೇಕು ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ