ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಮದುಮಕ್ಕಳು ಪರದಾಡಿದ ಘಟನೆ ನಡೆದಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ರೋಡ್ ಶೋ ನಡೆಸಲಿದ್ದಾರೆ. ಮಾಗಡಿರಸ್ತೆಯಿಂದ ಸುಮನಹಳ್ಳಿ ಜಂಕ್ಷನ್ ವರೆಗೆ ಮೆಗಾ ರೋಡ್ ಶೋ ನಡೆಡೆಯಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆ ಬಂದ್ ಮಾಡಲಾಗಿದ್ದು, ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಮದುಮಗನೊಬ್ಬ ಕಲ್ಯಾಣ ಮಂಟಪಕ್ಕೆ ಹೋಗಲಾಗದೇ ಪರದಾಡಿದ ಘಟನೆ ನೈಸ್ ರಸ್ತೆ ಜಂಕ್ಷನ್ ಬಳಿ ನಡೆದಿದೆ.
ನಾಳೆ ಕಲ್ಯಾಣ ಮಂಟಪದಲ್ಲಿ ವಿವಾಹವಿರುವುದರಿಂದ ಇಂದು ರಿಸಪ್ಶನ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ವರ ತನ್ನ ಕುಟುಂಬದ ಜೊತೆ ಕಾರಿನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ. ಈ ವೇಳೆ ನೈಸ್ ರೋಡ್ ಜಂಕ್ಷನ್ ಬಳಿ ಕಾರನ್ನು ತಡೆದ ಪೊಲೀಸರು ಮದುಮಗನನ್ನು ಕಾರಿನಲ್ಲಿ ತೆರಳು ಬಿಟ್ಟಿಲ್ಲ. ರಿಸಪ್ಶನ್ ಗೆ ತಡವಾಗುತ್ತಿದೆ ಎಂದು ಮನವಿ ಮಾಡಿದರೂ ಪೊಲೀಸರು ಮದುಮಗನನ್ನು ತಡೆದಿದ್ದಾರೆ.
ಸಾರ್ವಜನಿಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗಲಾಟೆಯಾಗಬಹುದು ಎಂಬ ಕಾರಣಕ್ಕೆ ಬ್ಯಾರಿಕೇಡ್ ಗಳನ್ನು ತೆರೆದು ಮದುಮಗ ಹಾಗೂ ಮನೆಯವರು ಕಾರಿನಲ್ಲಿ ತೆರಳಲು ಅವಕಾಶ ನೀಡಿದ್ದಾರೆ.
ಇನ್ನೊಂದೆಡೆ ಮದುಮಗಳೊಬ್ಬಳಿಗೂ ಇದೇ ರೀತಿಯ ತೊಂದರೆಯಾಗಿದ್ದು, ಕಾರಿನಲ್ಲಿ ಬಂದ ಮದುಮಗಳು ಹಾಗೂ ಕುಟುಂಬದವರನ್ನು ರಸ್ತೆ ಮಧ್ಯೆಯೇ ತಡೆದು ನಿಲ್ಲಿಸಿದ ಪೊಲೀಸರು ಬಳಿಕ ಬೈಕ್ ನಲ್ಲಿ ತೆರಳಲು ಅವಕಾಶ ಮಾಡಿಕೊಟ್ಟ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ