*ಶೇಂಗಾ ಎಂದು ವಿಷಬೀಜ ಸೇವಿಸಿದ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ*
ಪ್ರಗತಿವಾಹಿನಿ ಸುದ್ದಿ; ಹಳಿಯಾಳ: ಶಾಲೆಯ ಆವರಣದಲ್ಲಿ ಬೆಳದ ವಿಷಕಾರಿ ಬೀಜ ತಿಂದು 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗುಂಡೊಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶೇಂಗ ಬೀಜವೆಂದು ತಪ್ಪಾಗಿ ಭಾವಿಸಿ ಶಾಲೆಯ ಆವರಣದಲ್ಲಿ ಬೆಳದಿದ್ದ ಕಾಡು ಗಿಡದ ಬೀಜವನ್ನು ಮಕ್ಕಳು ತಿಂದಿದ್ದಾರೆ. ಶಾಲೆಯಿಂದ ಮನೆಗೆ ಬಂದ ಮಕ್ಕಳಿಗೆ ವಾಂತಿ ಬೇದಿ ಪ್ರಾರಂಭವಾಗಿ ತೀವ್ರ ಅಸ್ವಸ್ಥರಾಗಿದ್ದಾರೆ.
ತಕ್ಷಣ ಪೋಷಕರು ಕಾಳಗಿನಕೊಪ್ಪ ಗ್ರಾಮದ ಸರಕಾರಿ ಆಸ್ಪತ್ರೆ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಕ್ಕಳಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಗಣೇಶ ಅರಶೀಗೇರಿ, ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸಿಪಿಐ ಸುರೇಶ ಶಿಂಗೆ, ಪಿಎಸ್ ಐ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್ ಐ ಅಮಿನಸಾಬ್ ಅತ್ತಾರ ಹಾಗೂ ಸಿಬ್ಬಂದಿ ನಾಗೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ