ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಅನಗೋಳದಲ್ಲಿ ಛತ್ರಪತಿ ಸಂಭಾಜೀ ಮಾಹಾರಾಜರ ಪ್ರತಿಮೆ ಅನಾವರಣ ವೇಳೆ ಮಹಾರಾಷ್ಟ್ರ ಸಚಿವ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸುತ್ತಿವೆ.
ಇಂದು ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದಿಂದ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಿದ ಶಾಸಕ ಅಭಯ ಪಾಟೀಲ್, ಮೇಯರ್ ಸವಿತಾ ಕಾಂಬಳೆ, ಉಪ ಮೇಯರ್ ಆನಂದ ಚವ್ಹಾಣ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಯಿತು.
ಈ ಕಾರ್ಯಕ್ರಮದ ಆಯೋಜಕರಾಗಿದ್ದ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಮೇಯರ್, ಉಪ ಮೇಯರ್ ಹಾಗೂ ಭಾಗವಹಿಸಿದ್ದ ನಗರ ಸೇವಕರನ್ನು ಅಮಾನತ್ತು ಮಾಡಬೇಕು. ಪಾಲಿಕೆಯಲ್ಲಿ ಇರುವ ಮೇಯರ್ ಉಪ, ಮೇಯರ್ ಕಚೇರಿಗೆ ಬಿಗ ಹಾಕುತ್ತೇವೆ ಎಂದು ಹೋರಾಟಗಾರರು ಆಕ್ರೋಶ ಹೊರ ಹಾಕಿದರು.
ಬಳಿಕ ಮಹಾನಗರ ಪಾಲಿಕೆಗೆ ತೆರಳಿದ ಹೋರಾಟಗಾರರು ಪಾಲಿಕೆ ಮುಂದೆ ಮೇಯರ್ ಹಾಗೂ ಉಪ ಮೇಯರ್ ವಿರುದ್ಧ ಘೋಷಣೆ ಕೂಗಿ ಪಾಲಿಕೆ ಒಳಗಡೆ ಬಿಡುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಈ ವೇಳೆ ದೀಪಕ್ ಗುಡಗನಟ್ಟಿ, ಸುರೇಶ್ ಗವನ್ನವರ, ಗಣೇಶ ರೋಖಡೆ, ರಾಜು ನಾಶಿಪುಡಿ, ದಶರಥ ಬನೋಶಿ, ಬಳು ಜಡಗಿ, ಕೃಷ್ಣಾ ಖಾನಪ್ಪಣ್ಣವರ, ಬಸವರಾಜ ಅವರೊಳ್ಳಿ, ಮಹೇಶ್ ಹಟ್ಟಿಹೋಳಿ, ಆರೋಗ್ಯಪ್ಪಾ ಪಾದನಕಟ್ಟಿ, ಸುಧೀರ ಪಾಟೀಲ, ಸತೀಶ ಗುಡದವರ, ಉದಯ ಚಿಕ್ಕಣ್ಣವರ, ವಿಠಲ ಕಡಕೋಳ, ರುದ್ರಗೌಡ ಪಾಟೀಲ, ಸುರೇಶ ಮರಗೋಡ, ಹೊಳೇಪ್ಪಾ ಸುಲಧಾಳ, ಬಸವರಾಜ ದೂಳಪ್ಪಗೋಳ, ರಮೇಶ್ ಯರಗಣ್ಣವರ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ