ಚುನಾವಣೆ ಕರ್ತವ್ಯಕ್ಕೆ ಸಜ್ಜಾಗುತ್ತಿದೆ ಪೊಲೀಸ್ ಇಲಾಖೆ; ಸುವರ್ಣ ವಿಧಾನಸೌಧದಲ್ಲಿ ಶುರುವಾಗಿದೆ ತರಬೇತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಗದಗ ಮತ್ತು ಬೆಳಗಾವಿ ಪೊಲೀಸ್ ಕಮಿಷನರೇಟ್ ಅಧಿಕಾರಿಗಳು ಸರ್ವಸಜ್ಜುಗೊಳ್ಳುತ್ತಿದ್ದಾರೆ.

ಇದರ ಭಾಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕಾರ್ಯಾಗಾರ ಆರಂಭಗೊಂಡಿದೆ. ಕಾರ್ಯಾಗಾರದಲ್ಲಿ ಈ ಎಲ್ಲ ಜಿಲ್ಲೆಗಳ 350ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ನಡೆಯಬಹುದಾದ ವಿವಿಧ ಬಗೆಗಳ ಅಕ್ರಮಗಳಿಗೆ ಕಡಿವಾಣ ಹಾಕುವುದು, ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳಲು ಅನುಸರಿಸುವ ಉಪಕ್ರಮಗಳು, ಚುನಾವಣೆ ಪ್ರಚಾರಾವಧಿಯಿಂದ ಮತ ಎಣಿಕೆವರೆಗಿನ ಅವಧಿಯಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ, ಅಭ್ಯರ್ಥಿಗಳು, ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರು ಸೇರಿದಂತೆ ಎಲ್ಲ ನಾಗರಿಕರ, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ ಇತ್ಯಾದಿಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುತ್ತಿದೆ.

ಸಿಐಡಿ ಕಾನೂನು ಸಲಹೆಗಾರ ಮಹೇಶ್ ವಿ. ವೈದ್ಯ ಸಂಪನ್ಮೂಲ ವ್ಯಕ್ತಿಯಾಗಿ ಈ ಕುರಿತು ಮಾಹಿತಿ ನೀಡಲಿದ್ದಾರೆ. ಉತ್ತರ ವಲಯ ಐಜಿಪಿ ಮತ್ತು ಬೆಳಗಾವಿ ಪೊಲೀಸ್ ಕಮಿಷನರೇಟ್ ನಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ.

ಕಾರ್ಯಾಗಾರದಲ್ಲಿ ಬೆಳಗಾವಿ ಪೊಲೀಸ್ ಕಮಿಷನರ್ ಡಾ. ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ್ ಎಂ. ಪಾಟೀಲ್, ಡಾ.ಎಚ್.ಟಿ. ಶೇಖರ್, ಬಿ.ಆರ್. ನೇಮಗೌಡ, ಪಿ.ವಿ. ಸ್ನೇಹಾ, ವೇಣುಗೋಪಾಲ ಮತ್ತಿತರರು ಪಾಲ್ಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ