Kannada NewsKarnataka NewsLatestPolitics

*ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 7,925 ಹುದ್ದೆಗಳ ಭರ್ತಿಗೆ ಕ್ರಮ*

ಪ್ರಗತಿವಾಹಿನಿ ಸುದ್ದಿ: “ಸಮಾಜದ ನೆಮ್ಮದಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟು, ಕರ್ತವ್ಯ ನಿರ್ವಹಿಸುವಾಗ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಸೇವೆ ಮತ್ತು ಶೌರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಮೈಸೂರು ರಸ್ತೆಯ ಸಶಸ್ತ್ರ ಮೀಸಲು ಪಡೆ ಮುಖ್ಯ ಕಚೇರಿಯ ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದರು.

“ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವುದಷ್ಟೇ ನಮ್ಮ ಕರ್ತವ್ಯವಲ್ಲ. ಅವರು ಪ್ರತಿಪಾದಿಸಿದ ಕರ್ತವ್ಯನಿಷ್ಠೆ, ಶಿಸ್ತು ಮತ್ತು ಜನಸೇವೆಯ ಮೌಲ್ಯಗಳನ್ನು ಮುಂದುವರಿಸುವುದೂ ನಮ್ಮ ಜವಾಬ್ದಾರಿ. ರಾಜ್ಯದ ಆರು ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಿದರು. ಹುತಾತ್ಮರ ಕುಟುಂಬಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ” ಎಂದು ಭರವಸೆ ನೀಡಿದರು.

5,911 ಹುದ್ದೆಗಳ ಭರ್ತಿ; ಇನ್ನೂ 7,925 ಹುದ್ದೆಗಳಿಗೆ ಕ್ರಮ

“ಪೊಲೀಸ್ ಇಲಾಖೆಯನ್ನು ಬಲಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಸಿಎಂ‌ , ಕಳೆದ ಮೂರು ವರ್ಷಗಳಲ್ಲಿ 5,911 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಖಾಲಿ ಇರುವ ಇನ್ನೂ 7,925 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.

“ಪೊಲೀಸ್ ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಶಾಶ್ವತ ನೇಮಕಾತಿ ಮಂಡಳಿ ಸ್ಥಾಪಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ” ಎಂದರು.

“ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಗಳ ತನಿಖೆ, ಸಾಕ್ಷ್ಯಗಳ ಸಂರಕ್ಷಣೆ ಹಾಗೂ ಅಪರಾಧ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ತಂತ್ರಜ್ಞಾನ ಸ್ನೇಹಿಯಾಗಲು ಸುಮಾರು ₹142 ಕೋಟಿ ಅನುದಾನ ಒದಗಿಸಲಾಗಿದೆ” ಎಂದು ಹೇಳಿದರು.

ಪೊಲೀಸರ ತ್ಯಾಗಕ್ಕೆ ಬೆಲೆ ಕಟ್ಟಲಾಗದು

“ನಾನು ಇಲ್ಲಿ ಕೇವಲ ಹುತಾತ್ಮ ಪೊಲೀಸರನ್ನು ಸ್ಮರಿಸಲು ಬಂದಿಲ್ಲ. ನಮ್ಮೆಲ್ಲರ ಬದುಕಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಮಹಾನ್ ಜೀವಿಗಳಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಅವರ ಸೇವೆ ಮತ್ತು ಪ್ರಾಣತ್ಯಾಗಕ್ಕೆ ನಾವು ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಶೂರ ಪೊಲೀಸರನ್ನು ಈ ನಾಡಿಗೆ ನೀಡಿದ ಅವರ ತಂದೆ-ತಾಯಿ ಹಾಗೂ ಕುಟುಂಬದವರಿಗೂ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.

“ಹುತಾತ್ಮ ಪೊಲೀಸರ ಸ್ಮರಣಾರ್ಥ ನಾವು ಬೆಳಗಿಸುವ ದೀಪ ಕೇವಲ ಶ್ರದ್ಧಾಂಜಲಿಯ ಸಂಕೇತವಲ್ಲ. ಅದು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ನ್ಯಾಯವನ್ನು ಕಾಪಾಡುವ ನಮ್ಮೆಲ್ಲರ ಸಂಕಲ್ಪದ ಸಂಕೇತ. ನಿಮ್ಮ ತ್ಯಾಗವನ್ನು ಸಮಾಜ ಮರೆಯುವುದಿಲ್ಲ. ನಿಮ್ಮ ಕುಟುಂಬದೊಂದಿಗೆ ಸರ್ಕಾರ ಸದಾ ಇರುತ್ತದೆ” ಎಂದು ಭರವಸೆ ನೀಡಿದರು.

ಖಾಕಿ ಸಮವಸ್ತ್ರ ಧೈರ್ಯ, ನಂಬಿಕೆಯ ಸಂಕೇತ

ಪೊಲೀಸ್ ಇಲಾಖೆಯ ಸೇವೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಖಾಕಿ ಸಮವಸ್ತ್ರವು ಧೈರ್ಯ, ನಂಬಿಕೆ ಮತ್ತು ನ್ಯಾಯದ ಭರವಸೆಯ ಸಂಕೇತವಾಗಿದೆ ಎಂದು ಹೇಳಿದರು.

“ಪೊಲೀಸರು ಅಪರಾಧಿಗಳಿಗೆ ಸಿಂಹಸ್ವಪ್ನವಾಗಿರಬೇಕು. ಅದೇ ಸಮಯದಲ್ಲಿ ಅಸಹಾಯಕರಿಗೆ ‘ನಾನಿದ್ದೇನೆ, ನಿಮಗೆ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ’ ಎಂಬ ಭರವಸೆ ನೀಡಬೇಕು. ಸಮಾಜದ ನೆಮ್ಮದಿ ನಿಮ್ಮ ಕೈಯಲ್ಲಿದೆ. ಕಾನೂನನ್ನು ಜಾರಿಗೊಳಿಸುವುದಷ್ಟೇ ಅಲ್ಲ, ಸಮಾಜವನ್ನು ತಿದ್ದುವ ಜವಾಬ್ದಾರಿಯೂ ಪೊಲೀಸರ ಮೇಲಿದೆ” ಎಂದರು.

“ಕರ್ನಾಟಕ ಪೊಲೀಸ್ ಸಿಬ್ಬಂದಿ ತಮ್ಮ ಶಿಸ್ತು, ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಗೌರವ ತಂದಿದ್ದಾರೆ. ವಿವಿಧ ಸಂದರ್ಭಗಳಲ್ಲಿ ರಾಷ್ಟ್ರೀಯ ಮಟ್ಟದ ನಾಯಕರೊಂದಿಗೆ ಚರ್ಚಿಸುವಾಗಲೂ ಕರ್ನಾಟಕ ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ವೈಶಿಷ್ಟ್ಯವನ್ನು ಉಲ್ಲೇಖಿಸುವ ಹೆಮ್ಮೆ ತಮಗಿದೆ” ಎಂದು ತಿಳಿಸಿದರು.

ಪೊಲೀಸ್ ವಸತಿಗೆ ಆದ್ಯತೆ

ಪೊಲೀಸ್ ಸಿಬ್ಬಂದಿಯ ವಸತಿ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ‘ಪೊಲೀಸ್ ಗೃಹ-2025’ ಕಾರ್ಯಕ್ರಮದಡಿ ವಸತಿ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಪೊಲೀಸ್ ಸಿಬ್ಬಂದಿಗೆ ಉತ್ತಮ ಕೆಲಸದ ವಾತಾವರಣ ಕಲ್ಪಿಸುವುದರ ಜತೆಗೆ ಅವರ ಕುಟುಂಬಗಳ ಜೀವನಮಟ್ಟ ಸುಧಾರಿಸುವುದೂ ಸರ್ಕಾರದ ಆದ್ಯತೆಯಾಗಿದೆ” ಎಂದು ತಿಳಿಸಿದರು.

“ರಾಜ್ಯದಲ್ಲಿ ಹೊಸ ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ಕಟ್ಟಡಗಳ ನಿರ್ಮಾಣ, ಇಲಾಖೆಗೆ ಅಗತ್ಯವಾದ ವಾಹನಗಳ ಪೂರೈಕೆ ಹಾಗೂ ಮೂಲಸೌಕರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಮಾದಕ ದ್ರವ್ಯಗಳ ಹಾವಳಿ ನಿಯಂತ್ರಣ, ಕೋಮು ಸೌಹಾರ್ದತೆ ಕಾಪಾಡುವುದು ಮತ್ತು ಸಂಚಾರ ನಿರ್ವಹಣೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ” ಎಂದರು.

ಬೆಂಗಳೂರಿನ ಸಂಚಾರ ನಿರ್ವಹಣೆ ಸವಾಲು

“ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನ ದಟ್ಟಣೆಯನ್ನು ನಿರ್ವಹಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 1.40 ಕೋಟಿ ಜನಸಂಖ್ಯೆಯಿದ್ದು, ಸುಮಾರು 1.31 ಕೋಟಿ ವಾಹನಗಳಿವೆ. ನಗರದಲ್ಲಿ ರಸ್ತೆಗಳ ಪ್ರಮಾಣ ಸೀಮಿತವಾಗಿರುವುದರಿಂದ ಸಂಚಾರ ನಿರ್ವಹಣೆ ಸುಲಭದ ಕೆಲಸವಲ್ಲ. ಇಷ್ಟೊಂದು ಒತ್ತಡದ ನಡುವೆಯೂ ಪೊಲೀಸರು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಇಲಾಖೆಯ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.

“ನಗರದಲ್ಲಿ ಅಪರಾಧ ನಿಯಂತ್ರಣಕ್ಕೆ ವಿಶೇಷ ಕಾರ್ಯತಂತ್ರ ರೂಪಿಸುವುದು, ರೌಡಿಗಳ ಹಾವಳಿಗೆ ಕಡಿವಾಣ ಹಾಕುವುದು ಹಾಗೂ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.

ಪೊಲೀಸರ ಶಿಸ್ತು, ಸೇವೆ ಮಾದರಿ

“ರಾಜ್ಯದಲ್ಲಿ ಶಾಂತಿ ಕಾಪಾಡುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದು. ಗಡಿಯಲ್ಲಿ ಸೈನಿಕರು ದೇಶವನ್ನು ರಕ್ಷಿಸಿದರೆ, ರಾಜ್ಯದ ಶಾಂತಿಯ ತೋಟವನ್ನು ಕಾಪಾಡುವವರು ನಮ್ಮ ಪೊಲೀಸರು. ನಿಮ್ಮ ಶಿಸ್ತು ಮತ್ತು ಸೇವೆಯಿಂದಲೇ ಜನರು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗಿದೆ” ಎಂದು ಹೇಳಿದರು.

“ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಹಿಸಿರುವ ಪಾತ್ರವನ್ನು ಉಲ್ಲೇಖಿಸಿದ ಅವರು, ಘೋರ ಅಪರಾಧಗಳ ನಿಯಂತ್ರಣ ಮತ್ತು ಸಾರ್ವಜನಿಕರ ಸುರಕ್ಷತೆಗೆ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ” ಎಂದರು.

ಕರ್ತವ್ಯನಿಷ್ಠೆ ಕಳೆದುಕೊಳ್ಳಬೇಡಿ

“ನಿಮ್ಮ ಕೆಲಸವನ್ನು ಪ್ರೀತಿಸಿ. ಕರ್ತವ್ಯದ ಮೇಲಿನ ಶ್ರದ್ಧೆ ಮತ್ತು ನಿಷ್ಠೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಹೊಸ ತಂತ್ರಜ್ಞಾನ ಮತ್ತು ಹೊಸ ಸವಾಲುಗಳಿಗೆ ತಕ್ಕಂತೆ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಜನಸಾಮಾನ್ಯರು ಎಲ್ಲರೂ ಒಂದೇ ಎಂಬ ಭಾವನೆಯಿಂದ ಜನಸೇವೆಯಲ್ಲಿ ತೊಡಗಿಸಿಕೊಳ್ಳಿ” ಎಂದು ಕರೆ ನೀಡಿದರು.

“ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳ ಅನುಭವ ಮತ್ತು ಸೇವೆಯನ್ನು ಸರ್ಕಾರ ಗೌರವಿಸುತ್ತದೆ. ಅವರ ಅನುಭವವನ್ನು ಅಗತ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳಲು ಸರ್ಕಾರ ಸಿದ್ಧವಿದೆ. ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕ್ಷೇಮಕ್ಕಾಗಿ ಪ್ರಾರ್ಥಿಸಿದ ಮುಖ್ಯಮಂತ್ರಿ, ಹುತಾತ್ಮ ಪೊಲೀಸರ ತ್ಯಾಗವನ್ನು ಸ್ಮರಿಸುವುದರ ಜತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button