*ಸರ್ಕಾರದ ವಿರುದ್ಧ ಪ್ರತಿಭಟಿಸಿದ ಕರವೇ ಕಾರ್ಯಕರ್ತರು, ರೈತರನ್ನು ವಶಕ್ಕೆ ಪಡೆದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 3500 ರೂ ಕಬ್ಬಿಗೆ ದರ ನಿಗಧಿ ಮಾಡಬೇಕು ಎಂದು ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕಿಚ್ಚು ಹೆಚ್ಚಿದೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದು, ಇಂದು ಬೆಳಗಾವಿಯಲ್ಲಿ ಕರವೇ ಹಾಗೂ ರೈತರು ಪ್ರತಿಭಟನೆ ನಡೆಸಿದ್ದಾರೆ.
ಕಬ್ಬಿನ ಬೆಂಬಲ ಬೆಲೆ ಘೋಷಣೆಗೆ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ಕರವೇ ಸೇರಿದಂತೆ ವಿವಿಧ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ರೈತ ಮುಖಂಡರು ಹಾಗೂ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಇಂದು ನಗರದ ಕೇಂದ್ರ ಬಸ್ ನಿಲ್ದಾಣದಿಂದ ಚನ್ನಮ್ಮ ವೃತ್ತದವರೆಗೆ ತಲೆ ಮೇಲೆ ಕಬ್ಬು ಇಟ್ಟು, ರೈತ ಸಂಘಟನೆ ಹಾಗೂ ಕರವೇ ವತಿಯಿಂದ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಲಾಯಿತು. ಬಳಿಕ ಚನ್ನಮ್ಮ ವೃತ್ತದಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ಕರವೇ ಕಾರ್ಯಕರ್ತರು, ರೈತರು ಅಸಮಾಧಾನ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದಲ್ಲಿ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.



