CrimeKannada NewsKarnataka NewsLatest

*ಕದ್ದ ಚಿನ್ನದ ಸರಕ್ಕಾಗಿ ಕಳ್ಳನಿಗೆ 50ಕ್ಕೂ ಹೆಚ್ಚು ಬಾಳೆಹಣ್ಣು ತಿನ್ನಿಸಿದ ಪೊಲೀಸರು*: *ಸಕ್ಸಸ್‌ ಆಯ್ತಾ ಮುಂಬೈ ಪೊಲೀಸರ ವಿಚಿತ್ರ ತಂತ್ರ?*

ಪ್ರಗತಿವಾಹಿನಿ ಸುದ್ದಿ: ಕದ್ದ ಚಿನ್ನದ ಸರವನ್ನು ಮರಳಿ ಪಡೆಯಲು ಮುಂಬೈ ಪೊಲೀಸರು ಅನುಸರಿಸಿದ ವಿಚಿತ್ರ ತಂತ್ರವೊಂದು ಇದೀಗ ಸಖತ್‌ ಸುದ್ದಿಯಾಗಿದೆ. ಮಹಿಳೆಯ ಕದ್ದ ಚಿನ್ನದ ಸರವನ್ನು ಕಳ್ಳ ನುಂಗಿಬಿಟ್ಟಿದ್ದ. ಸರವನ್ನು ಹೊರತೆಗೆಯಲು ಪೊಲೀಸರು ಕಳ್ಳನಿಗೆ 50ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಿದ ಬಳಿಕ ಕೊನೆಗೂ ಸರವನ್ನು ಪಡೆದು ಮಹಿಳೆಗೆ ಹಿಂದಿರುಗಿಸಿದ್ದಾರೆ.

ಮುಂಬೈ ನಗರದ ಬೀದಿಯಲ್ಲಿ ಮಹಿಳೆಯೊಬ್ಬರಿಂದ ಚಿನ್ನದ ಸರ ಕಸಿದುಕೊಂಡಿದ್ದ 25 ವರ್ಷದ ಕಳ್ಳನನ್ನು ಪೊಲೀಸರು ಬಂಧಿಸಿದ್ದರು. ಆದರೆ ವಿಚಾರಣೆ ವೇಳೆ ಕದ್ದ ಸರದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಕಳ್ಳ ಆ ಸರವನ್ನೇ ನುಂಗಿಬಿಟ್ಟಿದ್ದ.

ಕಳ್ಳ ಸರ ನುಂಗಿದ್ದನ್ನು ತಿಳಿದ ಪೊಲೀಸರು ಬಳಿಕ ಆಸ್ಪತ್ರೆಗೆ ಕರೆದೊಯ್ದು ಎಕ್ಸ್‌ರೇ ಮಾಡಿಸಿದಾಗ ಚಿನ್ನದ ಸರ ಕಳ್ಳನ ಹೊಟ್ಟೆಯಲ್ಲಿರುವುದು ಪತ್ತೆಯಾಗಿದೆ. ಸರವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಾಗಿತ್ತು. ಆದರೆ ಅದು ಅಪಾಯಕಾರಿಯಾಗುವುದರ ಜೊತೆಗೆ ಹೆಚ್ಚಿನ ವೆಚ್ಚವೂ ಆಗುವ ಸಾಧ್ಯತೆ ಇತ್ತು.

ಹೀಗಾಗಿ ಮೊದಲಿಗೆ ಎನಿಮಾ ಮೂಲಕ ಸರವನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಅದರಿಂದ ಫಲಿತಾಂಶ ಸಿಗಲಿಲ್ಲ. ವೈದ್ಯರು ಶಸ್ತ್ರಚಿಕಿತ್ಸೆಯೇ ಸೂಕ್ತ ಮಾರ್ಗ ಎಂದು ಸೂಚಿಸಿದರೂ, ಪೊಲೀಸರು ಬೇರೆ ಮಾರ್ಗ ಹುಡುಕಿದರು.

ಕೊನೆಗೆ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಸಲಹೆಯಂತೆ ಕಳ್ಳನಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು ತಿನ್ನಿಸಲು ನಿರ್ಧರಿಸಲಾಯಿತು. ದಿನವಿಡೀ 40ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಲಾಯಿತು. ಬಳಿಕವೂ ಪ್ರಯತ್ನ ಮುಂದುವರಿಸಲಾಗಿದ್ದು, ಒಟ್ಟು 50ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಿದ ನಂತರ ಚಿನ್ನದ ಸರ ಮಲದೊಂದಿಗೆ ಹೊರಬಂದಿತು.

ಸರವನ್ನು ಪತ್ತೆಹಚ್ಚಿದ ಪೊಲೀಸರು ಅದನ್ನು ಸ್ವಚ್ಛಗೊಳಿಸಿ ಸೋಂಕುರಹಿತಗೊಳಿಸಿದ ಬಳಿಕ ಮಹಿಳೆಗೆ ಹಿಂತಿರುಗಿಸಿದ್ದಾರೆ. ಒಂದೆಡೆ ಕಳುವಾದ ಸಾರ್‌ ವಾಪಸ್‌ ಸಿಕ್ಕ ಖುಷಿಯಾದರೆ ಮತ್ತೊಂದಡೆ ಆ ಸರ ಎಲ್ಲಿಂದ ಹೊರ ಬಂತು ಎಂದು ತಿಳಿದು ಮಹಿಳೆ ಅದನ್ನು ಮುಟ್ಟಲು ಹಿಂದೇಟು ಹಾಕಿದ್ದಾರೆ. ಬಳಿಕ ಅದನ್ನು ಪ್ಯಾಸ್ಟಿಕ್‌ ಚೀಲದ ಮೂಲಕ ಹಾಕಿ ಮಹಿಳೆಗೆ ನೀಡಲಾಯಿತು.

ಘಟನೆ ಬಳಿಕ ಕಳ್ಳನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಚಿನ್ನದ ಸರವನ್ನು ನುಂಗಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಕರಣಗಳಲ್ಲಿ ಮುಂಬೈ ಪೊಲೀಸರ ಇಂತಹ ಪ್ರಯತ್ನಗಳು ಈ ಹಿಂದೆಯೂ ಸುದ್ದಿಯಾಗಿದ್ದವು. ಕಳೆದ ವರ್ಷ ಜುಲೈನಲ್ಲಿ ಮತ್ತೊಬ್ಬ ಕಳ್ಳನಿಗೆ ಎರಡು ಡಜನ್‌ಗೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಿ, ವಿರೇಚಕ ಬೆರೆಸಿದ ಹಲವು ಲೀಟರ್ ಹಾಲನ್ನೂ ಕುಡಿಸಲಾಗಿತ್ತು. ಆತನ ಹೊಟ್ಟೆಯಲ್ಲಿದ್ದ ಚಿನ್ನದ ಸರವನ್ನು ಇದೇ ರೀತಿಯಲ್ಲಿ ಹೊರತೆಗೆದು ವಶಕ್ಕೆ ಪಡೆಯಲಾಗಿತ್ತು. ಇದಕ್ಕೂ ಮೊದಲು ದೊಡ್ಡ ಪೆಂಡೆಂಟ್ ಹೊಂದಿದ್ದ ಚಿನ್ನದ ಸರವನ್ನು ನುಂಗಿದ್ದ ಕಳ್ಳನಿಗೆ ಐದು ಡಜನ್ ಬಾಳೆಹಣ್ಣುಗಳನ್ನು ತಿನ್ನಿಸಲಾಗಿತ್ತು. ಕಳ್ಳನು ಕದ್ದ ಸರವನ್ನು ಯಶಸ್ವಿಯಾಗಿ ಹೊರಹಾಕಿದನು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button