ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊಲ್ಲಾಪುರದಿಂದ ಉಡುಪಿಗೆ ಸಾಗಿಸುತ್ತಿದ್ದ 5 ಕೋಟಿ ರೂ. ದರೋಡೆ ಮಾಡಿದ್ದ ಪ್ರಕರಣದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 2.44 ಕೋಟಿ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ಮೂವರಿಗಾಗಿ ಶೋಧ ಮುಂದುವರಿದಿದೆ.
ಮಹಾರಾಷ್ಟ್ರದ ದೂದೇಭಾಂವಿ ಕವಟೇಮಂಕಾಳದ ಶ್ರೀಕಾಂತ ಅರವಿಂದ ಕೋಳೇಕರ (25 ) ಹಾಗೂ ಸಂಭಾಜಿ ಶಿವಾಜಿ ಮೇನಕುದಳೆ (28 ) ಬಂಧಿತರು.
ಆರೋಪಿತರ ಪತ್ತೆಗಾಗಿ ಬೆಳಗಾವಿ ಎಸ್‌ಪಿ, ಅಡಿಷನಲ್ ಎಸ್‌ಪಿ ಹಾಗೂ ಬೈಲಹೊಂಗಲ ಡಿವೈಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಬೈಲ ಹೊಂಗಲ ಪಿಐ ಯು.ಎಚ್.ಸಾತೇನಹಳ್ಳಿ, ಕಿತ್ತೂರು ಸಿಪಿಐ ಮಹಾಂತೇಶ ಹೊಸಪೇಟೆ ನೇತೃತ್ವದಲ್ಲಿ ಬೈಲಹೊಂಗಲ ಪಿಎಸ್‌ಐ ಪ್ರವೀಣ ಕೋಟಿ, ನೇಸರಗಿ ಪಿಎಸ್‌ಐ ವಾಯ್.ಎಲ್.ಶೀಗಿಹಳ್ಳಿ, ಪಿಎಸ್‌ಐಗಳಾದ ರಾಜು ಪೂಜೇರಿ, ಚಂದ್ರು ಸಾಗನೂರ, ಎಎಸ್‌ಐ ಎ ಜಿ ಸಾಲಿ, ಎನ್ . ವಿ . ಪರಡ್ಡಿ, ಎಸ್ ಸಿ ಕರವೀನರವರ, ಎ ಕೆ ವಂಜಾರಿ, ಯು.ಹೆಚ್.ಪೂಜೇರ ಎಲ್.ಬಿ.ಹಮಾನಿ ಮೊದಲಾದವರನ್ನು ಒಳಗೊಂಡ ತಂಡ ರಚಿಸಿ ತನಿಖೆ ನಡೆಸಿದ್ದರು.
ವಿಕಾಸ ವಿಲಾಸ್ ಕದಂ ಎಂಬುವವರು ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಕೇರಳದ ತಲಚ್ಚೇರಿಯಲ್ಲಿ ಬಂಗಾರದ ಅಂಗಡಿಗಳನ್ನು ಇಟ್ಟುಕೊಂಡಿದ್ದು ಏ.8ರಂದು ಕೊಲ್ಲಾಪುರದಿಂದ ಉಡುಪಿ ಮೂಲಕ ಕೇರಳಕ್ಕೆ ಬೊಲೆರೋ ವಾಹನದಲ್ಲಿ ಒಟ್ಟು 4 ಕೋಟಿ 97 ಲಕ್ಷ ರೂ.ಗಳನ್ನು ಸಾಗಾಟ ಮಾಡಲಾಗುತ್ತಿತ್ತು.
5 ಜನ ದರೋಡೆಕೋರರು ಹಣ ಸಾಗಿಸುತ್ತಿದ್ದ ಬೊಲೆರೋ ವಾಹನವನ್ನು ಎರ್ಟಿಗಾ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಎಂ . ಕೆ . ಹುಬ್ಬಳ್ಳಿ ಗ್ರಾಮದ ಬಳಿ ಅಡ್ಡಗಟ್ಟಿದ್ದರು. ಹಣ ಸಾಗಿಸುತ್ತಿದ್ದ ವಾಹನದ ಚಾಲಕ ಹಾಗೂ ಕ್ಲೀನರ್‌ಗೆ ಪಿಸ್ತೂಲ್ ತೋರಿಸಿ ಹೆದರಿಸಿ ವಾಹನದಲ್ಲಿ ಸಾಗಿಸುತ್ತಿದ್ದ ಹಣವನ್ನು ಮತ್ತು ಮೊಬೈಲಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ವಿಕಾಸ ವಿಲಾಸ ಕದಂ ಅವರು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖಾ ತಂಡವು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೆಳಗಾವಿ ಬಳಿ ವಾಹನ ಅಡ್ಡಗಟ್ಟಿ, ಪಿಸ್ತೂಲ್, ಚಾಕು ತೋರಿಸಿ 4.97 ಕೋಟಿ ರೂ ದರೋಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ